ವಿಶ್ವ ಕೊಂಕಣಿ ಕೇಂದ್ರದಲ್ಲಿ “ವರ್ಧನಿ” ಸಹಯೋಗದೊಂದಿಗೆ ದಿ. 02-08-2026 ರಂದು “ಸ್ಕೇಲ್ ಅಪ್” ಉದ್ಯಮ ಉನ್ನತಿ ಕೊಂಕಣಿ ಮಹಿಳಾ ಉದ್ಯಮಿಗಳಿಗೆ ಎರಡು ದಿವಸಗಳ ಸ-ನಿವಾಸ ಉಚಿತ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವತಿಕಾ ಇಂಟರ ನ್ಯಾಷನಲ್, ನಿರ್ಮಲಾ ಟ್ರಾವೆಲ್ಸ್ ನ ಮಾಲೀಕರಾದ ಶ್ರೀಮತಿ ವತಿಕಾ ಕಾಮತ ಪೈ ಯವರು ‘ಮಹಿಳೆಯರು ತಮ್ಮಲ್ಲಿ ಸ್ವ ಉದ್ಯಮ ಚಿಂತನೆ ಬೆಳೆಸಿರುವುದು ಒಂದು ಉತ್ತಮ ವಿಚಾರವಾಗಿದ್ದು, ತಮ್ಮದೇ ಸ್ವಂತ ಉದ್ಯಮಗಳನ್ನು ಇನ್ನೂ ಮುಂದಕ್ಕೆ ತರುವಂತಹ ಅಗತ್ಯವಿರುವ ಆತ್ಮವಿಶ್ವಾಸ ಬೆಳೆಸುವ, ದೃಢವಾದ ನಂಬಿಕೆ, ಸಹಭಾಗಿತ್ವ, ಸಂಪರ್ಕ, ಮೊದಲಾದ ವಿಚಾರಗಳನ್ನು ತಿಳಿಸುತ್ತಾ ಹಲವಾರು ನಿದರ್ಶನಗಳನ್ನು ಹಾಗೂ ಸಲಹೆಗಳನ್ನು ನೀಡುತ್ತಾ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕರಾದ ನಂದಗೋಪಾಲ ಶೆಣೈ ಯವರು ಜೀವನದಲ್ಲಿ ಪ್ರಾಮಾಣಿಕವಾಗಿ ಆತ್ಮ ವಿಶ್ವಾಸ ಹಾಗೂ ಕೌಶಲ್ಯತೆಯಿಂದ ಮುಂದುವರಿದರೆ ಯಾವುದೇ ಉದ್ಯಮವು ಪ್ರಗತಿಯತ್ತ ಸಾಗುವುದರಲ್ಲಿ ಸಂದೇಹವಿಲ್ಲ ಎಂದು ಸ್ಪೂರ್ಥಿದಾಯಕ ಮಾತುಗಳನ್ನಾಡುತ್ತಾ ಎಲ್ಲರಿಗೂ ಅಭಿನಂದಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ ಡಿ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಲಿಯಂಡಿಸೋಜಾ ಧನ್ಯವಾದ ಸಮರ್ಪಣೆ ಮಾಡಿದರು. ಹಾಗೂ ಸಮಾರಂಭದಲ್ಲಿ ‘ವರ್ಧನಿ’ ಪ್ರವರ್ತಕಿ ಉಷಾ ನಂದಗೋಪಾಲ ಶೆಣೈ , ವಿಶ್ವ ಕೊಂಕಣಿ ಕೇಂದ್ರದ ಸಲಹಾ ಸಮಿತಿಯ ನರೇಶ್ ಕಿಣಿ, ಎಂ ಆರ್ ಕಾಮತ್ ಉಪಸ್ಥಿತರಿದ್ದರು. ಸುಚಿತ್ರಾ ಎಸ್ ಶೆಣೈ ಕಾರ್ಯಕ್ರಮವನ್ನು ನಿರೂಪಿಸಿದರು.
ಒಟ್ಟು 16 ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳಲ್ಲಿ ತಮ್ಮ ವ್ಯವಹಾರದ ಜ್ನಾನಗಳನ್ನು, ಹಾಗೂ ಉದ್ಯೋಗವನ್ನು ಇನ್ನೂ ಮುಂದಕ್ಕೆ ತರಲು ಸಂಬಂಧ ಪಟ್ಟಂತಹ ಹಲವಾರು ವಿಷಯಗಳನ್ನು ಮನವರಿಕೆ ಮಾಡಿ ಕೊಟ್ಟರು. ಲಕ್ಶ್ಮೀ ಕಿಣಿ ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸುತ್ತಾ, ರಕ್ಷಾ ಶೆಣೈ ಪರಿಚಯ ಮಾಡಿಕೊಟ್ಟರು. ಬೇರೆ ಬೇರೆ ಪ್ರದೇಶಗಳಿಂದ ಆಗಮಿಸಿದ ಉದ್ಯಮ ಶೀಲತಾ ಮಹಿಳಾ ಉದ್ಯಮಿಗಳು ಉತ್ಸಾಹದಿಂದ ಕಾರ್ಯಾಗಾರದಲ್ಲಿ ಆತ್ಮ ವಿಶ್ವಾಸದಿಂದ ತಮ್ಮ ಅನುಭವಗಳನ್ನು ಹಾಗೂ ಪಡಕೊಂಡಂತಹ ಪ್ರಯೋಜನಗಳನ್ನು ಎಲ್ಲರೊಂದಿಗೆ ಸಂತೋಷದಿಂದ ಹಂಚಿಕೊಂಡರು. ಮುಂದೆ ತಾವು ಒಬ್ಬ ಒಳ್ಳೆಯ ಉದ್ಯಮೋನ್ನತಿ ಯಾಗುವ ಭರವಸೆಯನ್ನು ನೀಡಿದರು.

