ಬ್ರಹ್ಮಾವರ : ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜುಲೈ 20ರಂದು (ಸೋಮವಾರ) ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಬ್ರಹ್ಮಾವರ ತಾಲೂಕಿನ 52ನೇ ಹೇರೂರುದಲ್ಲಿರುವ ರುಡ್‌ಸೆಟ್ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಸಾರ್ವಜನಿಕರು ಹಾಗೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಸಂಸ್ಥೆ ಮನವಿ ಮಾಡಿದೆ.
“ಪ್ರತಿಯೊಬ್ಬ ರಕ್ತದಾನಿಯು ಸಮಾಜವನ್ನು ಕಾಪಾಡುವ ವ್ಯಕ್ತಿ” ಎಂಬ ಧ್ಯೇಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಶಿಬಿರದ ಮೂಲಕ ಅಗತ್ಯವಿರುವ ರೋಗಿಗಳಿಗೆ ರಕ್ತ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ರಕ್ತದಾನವು ಜೀವ ಉಳಿಸುವ ಅತ್ಯಂತ ಶ್ರೇಷ್ಠ ದಾನವಾಗಿದ್ದು, ಆರೋಗ್ಯವಂತರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸುವ ಕಾರ್ಯದಲ್ಲಿ ಭಾಗಿಯಾಗುವಂತೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

