ಲಿಫ್ಟ್ ದುರಂತಕ್ಕೆ ಯಾರು ಹೊಣೆ ? ಸುಪ್ರೀಂ ಕೋರ್ಟ್ ನೀಡಿತು ಸ್ಪಷ್ಟ ಉತ್ತರ

0
25

ನವದೆಹಲಿ : ಬಹುಮಹಡಿ ಕಟ್ಟಡಗಳಲ್ಲಿ ಲಿಫ್ಟ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಲಿಫ್ಟ್ ಅಪಘಾತಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಹಾಗೂ ದೇಶದಾದ್ಯಂತ ಪರಿಣಾಮ ಬೀರುವ ಐತಿಹಾಸಿಕ ತೀರ್ಪು ನೀಡಿದೆ. ಲಿಫ್ಟ್ ಅಪಘಾತ ಸಂಭವಿಸಿದರೆ ಕೇವಲ ಒಬ್ಬರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಲಿಫ್ಟ್ ತಯಾರಿಕಾ ಕಂಪನಿ, ನಿರ್ವಹಣೆ (ಮೇಂಟನೆನ್ಸ್) ವಹಿಸಿರುವ ಸಂಸ್ಥೆ ಹಾಗೂ ಕಟ್ಟಡದ ಮಾಲೀಕರು ಜಂಟಿಯಾಗಿ ಜವಾಬ್ದಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಹಾಗೂ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರನ್ನೊಳಗೊಂಡ ಪೀಠವು, ಲಿಫ್ಟ್ ಅನ್ನು ‘ಸಾಮಾನ್ಯ ಸಾರಿಗೆ ವ್ಯವಸ್ಥೆ (Common Carrier)’ ಎಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಜನರು ಲಿಫ್ಟ್‌ಗೆ ಪ್ರವೇಶಿಸಿದ ಕ್ಷಣದಿಂದ ತಮ್ಮ ಜೀವ ಹಾಗೂ ಸುರಕ್ಷತೆಯನ್ನು ಸಂಪೂರ್ಣವಾಗಿ ಅದರ ಮೇಲೆಯೇ ಅವಲಂಬಿಸುತ್ತಾರೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಲಿಫ್ಟ್ ತಯಾರಕ, ನಿರ್ವಹಣಾ ಸಂಸ್ಥೆ ಮತ್ತು ಕಟ್ಟಡದ ಮಾಲೀಕರ ಜಂಟಿ ಕರ್ತವ್ಯವಾಗಿದೆ ಎಂದು ಕೋರ್ಟ್ ಹೇಳಿದೆ.

2003ರ ಅಪಘಾತ ಪ್ರಕರಣಕ್ಕೆ ಅಂತಿಮ ತೀರ್ಪು

ಈ ತೀರ್ಪು 2003ರಲ್ಲಿ ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (R&AW) ಪ್ರಧಾನ ಕಚೇರಿಯಲ್ಲಿ ನಡೆದ ಲಿಫ್ಟ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದೆ. ಲಿಫ್ಟ್ 6 ಮತ್ತು 7ನೇ ಮಹಡಿಗಳ ನಡುವೆ ಸಿಲುಕಿಕೊಂಡಿದ್ದ ವೇಳೆ, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಹೊರಬರಲು ಯತ್ನಿಸುತ್ತಿದ್ದ ಮಾಜಿ ರಾಜತಾಂತ್ರಿಕ ಅಧಿಕಾರಿ ವಿಪಿನ್ ಹಂಡಾ ಅವರು ಲಿಫ್ಟ್ ದಿಢೀರ್ ಕೆಳಗೆ ಜಾರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (NCDRC) ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಓಟಿಸ್ ಎಲಿವೇಟರ್ ಕಂಪನಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಹಂಡಾ ಕುಟುಂಬಕ್ಕೆ ಶೇ.9ರ ಬಡ್ಡಿಯೊಂದಿಗೆ ₹3.01 ಕೋಟಿ ಪರಿಹಾರ ನೀಡುವಂತೆ ಆದೇಶಿಸಿದೆ.

‘ಹ್ಯೂಮನ್ ಎರರ್’ ವಾದ ತಳ್ಳಿ ಹಾಕಿದ ಕೋರ್ಟ್

ಅಪಘಾತಕ್ಕೆ ಮಾನವ ಸಹಜ ತಪ್ಪು (Human Error) ಕಾರಣ ಎಂದು ಓಟಿಸ್ ಕಂಪನಿ ವಾದಿಸಿತ್ತು. ಆದರೆ, ಲಿಫ್ಟ್‌ನಲ್ಲಿ ಹಲವು ದಿನಗಳಿಂದ ತಾಂತ್ರಿಕ ದೋಷವಿದ್ದರೂ ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳದಿರುವುದು ಗಂಭೀರ ನಿರ್ಲಕ್ಷ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಸರಿಯಾದ ಮೇಲ್ವಿಚಾರಣೆ ನಡೆಸದ ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್ (MES) ಹಾಗೂ ದೂರುಗಳನ್ನು ನಿರ್ಲಕ್ಷಿಸಿದ ಸರ್ಕಾರಿ ಇಲಾಖೆಯೂ ಜವಾಬ್ದಾರರಾಗಿವೆ ಎಂದು ತಿಳಿಸಿದೆ.

ಪರಿಹಾರದ ಹೊಣೆಗಾರಿಕೆ ಹಂಚಿಕೆ

  • ಓಟಿಸ್ ಎಲಿವೇಟರ್ ಕಂಪನಿ – 70%
  • ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್ (MES) – 25%
  • ಸರ್ಕಾರಿ ಇಲಾಖೆ (ಕಟ್ಟಡ ಮಾಲೀಕತ್ವ) – 5%

ಕೋರ್ಟ್‌ನ ಮಹತ್ವದ ಸಂದೇಶ

“ಅಪಘಾತ ಸಂಭವಿಸಿದ ಬಳಿಕ ಯಾರದ್ದು ಎಷ್ಟು ತಪ್ಪು ಎಂಬುದನ್ನು ಸಾಬೀತುಪಡಿಸುವ ಹೊಣೆ ಸಂತ್ರಸ್ತರದ್ದಲ್ಲ. ಜಂಟಿಯಾಗಿ ಜವಾಬ್ದಾರರಾಗಿರುವ ಎಲ್ಲರಿಂದಲೂ ಸಂಪೂರ್ಣ ಪರಿಹಾರ ಪಡೆಯುವ ಹಕ್ಕು ಸಂತ್ರಸ್ತರಿಗೆ ಹಾಗೂ ಅವರ ಕುಟುಂಬಕ್ಕೆ ಇದೆ” ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಈ ತೀರ್ಪು ದೇಶದಾದ್ಯಂತ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು ಹಾಗೂ ಕಚೇರಿ ಕಟ್ಟಡಗಳ ಲಿಫ್ಟ್ ಸುರಕ್ಷತಾ ನಿರ್ವಹಣೆಗೆ ಹೊಸ ಮಾನದಂಡವಾಗಲಿದೆ.