ಮಂಗಳೂರು: ತಪ್ಪು , ಯಾರು ಮಾಡಿದರೂ ತಪ್ಪೇ ; ಸಹಾಯ, ಯಾರು ಮಾಡಿದರೂ ಸಹಾಯವೇ ಎಂದು ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ನುಡಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಮಂಗಳೂರು ತಾ| ಘಟಕದ ವತಿಯಿಂದ ಹಿರಿಯ ಸಾಹಿತಿ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು , ವಕೀಲ ವೃತ್ತಿಯನ್ನು ಕೈಗೊಂಡು , ಎಂಬತ್ತೈದನೆಯ ವಯಸ್ಸಿನಲ್ಲಿ ವಕೀಲ ವೃತ್ತಿಯನ್ನು ನಿಲ್ಲಿಸಿದ ಬಳಿಕ ಸಾಹಿತ್ಯದ ನಂಟಿನಿಂದ ಇದೀಗ ಆರು ವರ್ಷಗಳಲ್ಲಿ ಐದು ಕೃತಿಗಳನ್ನು ( ಸ್ವಂತ , ಅನುವಾದಿತ ) ಬರೆಯಲು ಸಾಧ್ಯವಾಗಿದೆ. ಇದರಲ್ಲಿ ತಮ್ಮ ರಾಘವಯ್ಯನ ಮತ್ತು ಮಡದಿ ಕಾವೇರಿಯ ಪಾತ್ರ ಬಹಳ ದೊಡ್ಡದು. ನನ್ನ ಬರವಣಿಗೆಯನ್ನು ಓದಿ , ತಪ್ಪಿದ್ದರೆ ತಿಳಿಸುವುದನ್ನು ಮತ್ತು ಮುದ್ರಣದ ಅಂತಿಮ ಹಂತದವರೆಗೂ ಸಹಾಯ ಮಾಡುವುದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು ಎನ್ನುತ್ತಾ ಅವರು ಈ ರೀತಿ ಅಭಿಪ್ರಾಯಪಟ್ಟರು.
ಘಟಕದ ಅಧ್ಯಕ್ಷ ಡಾ | ಮಂಜುನಾಥ ರೇವಣ್ಕರ್ ಲೇಖಕರನ್ನು ಸಂಮಾನಿಸಿ , ಇಂದು ಇಂತಹ ಸಜ್ಜನ ಬಂಧು , ಸಾಹಿತಿ , ಪಂಡಿತ ವಿದ್ವಾಂಸ ಮುಳಿಯ ತಿಮ್ಮಪ್ಪಯ್ಯನವರ ಸುಪುತ್ರರ ಮನೆಗೆ ಬಂದಿರುವುದು ನಮ್ಮ ಭಾಗ್ಯ ಎನ್ನುತ್ತಾ , ನೂರು ವರ್ಷ ಪೂರೈಸಿ ನೂರು ಕೃತಿಗಳೂ ಬರಲಿ ಎಂದು ಹಾರೈಸಿದರು.
ಹೆಸರಾಂತ ವೈದ್ಯ ಸಾಹಿತಿ ಡಾ. ಮುರಲೀಮೋಹನ್ ಚೂಂತಾರು ಅಭಿನಂದನಾ ಮಾತುಗಳನ್ನಾಡಿ , ಇಂತಹ ಸಾಹಿತಿಗಳ ಕೃತಿಗಳನ್ನು ಇಂದಿನ ಯುವ ಜನತೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದರಲ್ಲದೆ , ಲೇಖಕರ ಸಂಗ್ರಹದಲ್ಲಿರುವ ಹಳೆಯ ಮಹತ್ವದ ಗ್ರಂಥಗಳನ್ನು ಮರು ಪ್ರಕಟಿಸುವುದರಿಂದ ಸಾಹಿತ್ಯ ಲೋಕಕ್ಕೆ ಅಪಾರ ಲಾಭವಿದೆ ಎಂದರು.
ಗೋಪಾಲಕೃಷ್ಣ ಭಟ್ ಅವರ ಪತ್ನಿ ಕಾವೇರಿ ಅಮ್ಮ , ತಮ್ಮ ನಿವೃತ್ತ ವಿಜ್ಞಾನಿ ಮುಳಿಯ ರಾಘವಯ್ಯ , ಪುತ್ರಿಯರಾದ ದೇವಕಿ , ಡಾ | ಮಧುಮತಿ , ಅಳಿಯ ಭವಾನಿ ಶಂಕರ್ , ಮೊಮ್ಮಗು ಪುಟಾಣಿ ಪ್ರಾಚಿ ಜೊತೆಗಿದ್ದರು.
ಕ ಸಾ ಪ ದ.ಕ. ಜಿಲ್ಲಾ ಸಮಿತಿಯ ಸನತ್ ಕುಮಾರ್ ಜೈನ್ , ಘಟಕದ ಡಾ| ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು.
ರತ್ನಾವತಿ ಜೆ. ಬೈಕಾಡಿ ಪ್ರಾರ್ಥಿಸಿದರು. ಗೌ. ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ವಂದಿಸಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು.

