ಪ್ರೀಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ

0
77

ಉತ್ತರ ಪ್ರದೇಶದ ಈ ಘಟನೆ ಸಂಭವಿಸಿದೆ. ಅರ್ಧ ಸುಟ್ಟ ದೇಹ, ಪತ್ನಿಯ ಅಕ್ರಮ ಸಂಬಂಧ ಮತ್ತು ಪ್ರಿಯಕರನೊಂದಿಗೆ ಸೇರಿ ನಡೆಸಿದ ಸಂಚು – ಈ ರಹಸ್ಯವನ್ನು ಭೇದಿಸಲು ಮದ್ಯದ ಬಾಟಲಿಯ ಮೇಲಿದ್ದ ಒಂದು ಸಣ್ಣ QR ಕೋಡ್ ಸಹಾಯ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಗ್ರಾ ಪೊಲೀಸರು ಕೇವಲ 24 ಗಂಟೆಗಳಲ್ಲಿ ಈ ಇಡೀ ಪ್ರಕರಣವನ್ನು ಭೇದಿಸಿದ್ದಾರೆ.

ಲೋಕೇಂದ್ರ ಎಂಬ ವ್ಯಕ್ತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಸ್ವಲ್ಪ ಸಮಯದ ನಂತರ ರಸ್ತೆಬದಿಯಲ್ಲಿ ಆತನ ಅರ್ಧ ಸುಟ್ಟ ಶವ ಪತ್ತೆಯಾಯಿತು. ಆರಂಭದಲ್ಲಿ ಇದು ನಿಗೂಢ ಪ್ರಕರಣವೆಂದು ತೋರಿತು. ಆದರೆ ಕುಟುಂಬಸ್ಥರು ಶವವನ್ನು ಗುರುತಿಸಿ ದೂರು ನೀಡಿದಾಗ, ಪೊಲೀಸರ ಸಂಶಯ ಲೋಕೇಂದ್ರನ ಪತ್ನಿ ಮತ್ತು ಆಕೆಯ ಪ್ರಿಯಕರನ ಮೇಲೆ ಬಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು 5 ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದರು.

ತನಿಖೆಯ ವೇಳೆ ಕ್ರೈಮ್ ಸ್ಪಾಟ್‌ನಲ್ಲಿ ಒಂದು ಖಾಲಿ ಮದ್ಯದ ಬಾಟಲಿ ಪತ್ತೆಯಾಗಿತ್ತು. ಸಾಮಾನ್ಯವಾಗಿ ಇಂತಹ ವಸ್ತುಗಳನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ ಪೊಲೀಸರು ಆ ಬಾಟಲಿಯ ಮೇಲಿದ್ದ QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಅದು ಆ ಮದ್ಯವನ್ನು ಖರೀದಿಸಿದ ನಿರ್ದಿಷ್ಟ ಅಂಗಡಿಯ ವಿಳಾಸವನ್ನು ತೋರಿಸಿತು. ಪೊಲೀಸರು ತಕ್ಷಣ ಆ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅಲ್ಲಿ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತು.

ಸಿಸಿಟಿವಿ ದೃಶ್ಯದಲ್ಲಿ ಮೃತರಾದ ಲೋಕೇಂದ್ರ ಅವರು ಮಹೇಶ್ ಮತ್ತು ಧರಮ್‌ವೀರ್ ಎಂಬ ಇಬ್ಬರು ವ್ಯಕ್ತಿಗಳೊಂದಿಗೆ ಅಂಗಡಿಗೆ ಬಂದಿರುವುದು ಸ್ಪಷ್ಟವಾಗಿ ಕಂಡುಬಂದಿತು. ಈ ಪ್ರಮುಖ ಸುಳಿವು ಸಿಗುತ್ತಿದ್ದಂತೆ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಿಗಿಲುಗೊಳಿಸುವ ಸತ್ಯ ಹೊರಬಂದಿತು.

ಲೋಕೇಂದ್ರನ ಪತ್ನಿಗೂ ಮತ್ತು ಮಹೇಶನಿಗೂ ಅಕ್ರಮ ಸಂಬಂಧವಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ವಿಚಾರ ತಿಳಿದ ಲೋಕೇಂದ್ರ ಅದನ್ನು ವಿರೋಧಿಸಿ ಮನೆಯವರಿಗೆ ಮತ್ತು ನೆರೆಹೊರೆಯವರಿಗೆ ತಿಳಿಸಿದ್ದ. ಇದರಿಂದ ಕುಪಿತಗೊಂಡ ಪತ್ನಿ ಮತ್ತು ಪ್ರಿಯಕರ ಸೇರಿ ಲೋಕೇಂದ್ರನನ್ನು ದಾರಿಯಿಂದ ತಪ್ಪಿಸಲು ಸಂಚು ರೂಪಿಸಿದ್ದರು. ಮಹೇಶ್ ತನ್ನ ಸ್ನೇಹಿತ ಧರಮ್‌ವೀರ್‌ನ ಸಹಾಯ ಪಡೆದು, ಮದ್ಯ ಕುಡಿಯುವ ನೆಪದಲ್ಲಿ ಲೋಕೇಂದ್ರನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಲೋಕೇಂದ್ರನ ಕತ್ತು ಹಿಸುಕಿ ಕೊಂದ ನಂತರ, ಸಾಕ್ಷ್ಯ ನಾಶಪಡಿಸಲು ಮೃತದೇಹಕ್ಕೆ ಬೆಂಕಿ ಹಚ್ಚಿದ್ದರು. ಆದರೆ, ಅವರು ಮಾಡಿದ ಒಂದು ಸಣ್ಣ ತಪ್ಪು ಎಂದರೆ ಆ ಮದ್ಯದ ಬಾಟಲಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದು. ಆ QR ಕೋಡ್, ಸಿಸಿಟಿವಿ ದೃಶ್ಯ ಮತ್ತು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಕೇವಲ 24 ಗಂಟೆಗಳಲ್ಲಿ ಈ ಕೊಲೆ ರಹಸ್ಯ ಬಯಲಾಗಿದೆ. ಮೃತದೇಹದ ಮೇಲಿದ್ದ ಹಚ್ಚೆ (Tattoo) ಕೂಡ ಗುರುತು ಪತ್ತೆಹಚ್ಚಲು ಸಹಾಯ ಮಾಡಿದೆ.

LEAVE A REPLY

Please enter your comment!
Please enter your name here