ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ

0
56


ಉಡುಪಿ : ಯಕ್ಷಗಾನ ಕಲಾವಿದರು ಕಲಾ ತಪಸ್ವಿಗಳು. ಆದರೆ ಇತ್ತೀಚೆಗೆ ಸಾಹಿತಿಯೊಬ್ಬರು ಕೀಳು ಅಭಿರುಚಿಯ ಹೇಳಿಕೆ ನೀಡಿದ್ದರೂ ಕಲಾರಸಿಕರು ವಿಚಲಿತರಾಗಿಲ್ಲ. ಕಲಾವಿದರ ಸಾಧನೆಗಳನ್ನು ಸಮಾಜ ಗೌರವಿಸುತ್ತದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಹೇಳಿದರು.

ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಯಕ್ಷಗಾನ ಕಲಾರಂಗದ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಿ, ಯಕ್ಷಗಾನ ಕಲಾರಂಗ ಸಂಸ್ಥೆ ಸಾಧನೆ ಮಾದರಿಯಾಗಿದೆ. ಮನ್​ಕಿ ಬಾತ್​ನಲ್ಲಿಯೂ ಉಲ್ಲೇಖವಾಗಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಗಮನಕ್ಕೂ ಸಂಸ್ಥೆಯ ಮಾಹಿತಿ ನೀಡಲಾಗುವುದು ಎಂದರು.
ಅಂಬಲಪಾಡಿ ಜಿ. ಶಂಕರ್​ ಫ್ಯಾಮಿಲಿ ಟ್ರಸ್ಟ್​ನ ಅಧ್ಯಕ್ಷ ಡಾ. ಜಿ. ಶಂಕರ್​ ಪ್ರಶಸ್ತಿ ಪ್ರದಾನ ಮಾಡಿದರು. ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಭಟ್​ ಶುಭಾಶಂಸನೆಗೈದರು. ಮುಖ್ಯ ಅಭ್ಯಾಗತರಾಗಿ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ. ಆರ್​. ವೆಂಕಟರಮಣ, ಬೆಂಗಳೂರು ಉದ್ಯಮಿ ಹರೀಶ್​ ರಾಯಸ್​, ಬೆಂಗಳೂರಿನ ಡಾ. ಕಬ್ಯಾಡಿ ಹರಿರಾಮ ಆಚಾರ್ಯ, ಮಂದಾರ್ತಿ ಕೆ. ಎಂ. ಉಡುಪ ಟ್ರಸ್ಟ್​ನ ವಿಶ್ವಸ್ಥ ಕೆ. ಮಹೇಶ್​ ಉಡುಪ, ಅಡಿಕೆ ಪತ್ರಿಕೆಯ ಪ್ರಕಾಶಕ ಡಾ. ಪಡಾರು ರಾಮಕೃಷ್ಣ ಶಾಸ್ತ್ರಿ, ಲೀಲಾಕ್ಷ ಬಿ. ಕರ್ಕೇರ ಪಾಲ್ಗೊಂಡಿದ್ದರು.

23 ಮಂದಿ ಹಿರಿಯ ಕಲಾವಿದರಿಗೆ ತಲಾ ರೂ. 20,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ, ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿ ಸಂಸ್ಥೆಗೆ 1 ಲಕ್ಷ ರೂ. ಮೊತ್ತದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್​ ಯಕ್ಷಚೇತನ ಪ್ರಶಸ್ತಿಯನ್ನು ಸ್ವೀಕರಿಸಿದರು. ಯಕ್ಷಗಾನ ಕಲಾವಿದರ 44 ಮಕ್ಕಳಿಗೆ 7,11,500 ರೂ. ಪ್ರತಿಭಾ ಪುರಸ್ಕಾರ ಹಸ್ತಾಂತರಿಸಲಾಯಿತು.

ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಕಲಾವಿದರನ್ನು ಪರಿಚಯಿಸಿದರು. ಸದಾಶಿವ ರಾವ್​ ವಂದಿಸಿದರು.

LEAVE A REPLY

Please enter your comment!
Please enter your name here