ಉಡುಪಿ : ಸುರತ್ಕಲ್ ಬೀಚಿನ ಲೈಟ್ ಹೌಸ್‌ನ ಬಳಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಓರ್ವ ಮುಸ್ಲಿಂ ಯುವಕ ಯುವತಿ ಹಾಗೂ ಹಿಂದೂ ಯುವತಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಜೋಡಿಯನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಮಂಡ್ಯ ಮೂಲದ ಮುಸ್ಲಿಂ ಯುವಕ ಮತ್ತು ಮುಸ್ಲಿಂ ಯುವತಿ ಹಾಗೂ ಹಿಂದೂ ಯುವತಿ ಚಿತ್ರಾಪುರ ಬೀಚ್ ಸಮೀಪದ ರೆಸಾರ್ಟ್ ಒಂದರಲ್ಲಿ ತಂಗಿದ್ದರು. ಜೋಡಿಯನ್ನು ಗುರುತಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಕೂಡಲೇ ಸ್ಥಳಕ್ಕೆ ಧಾವಿಸಿ ಅವರಿಬ್ಬರನ್ನೂ ತಡೆಹಿಡಿದರು. ಬಳಿಕ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಜೋಡಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು.
ಠಾಣೆಯಲ್ಲಿ ಪ್ರಕರಣದ ವಿಚಾರಣೆ ನಡೆದ ವೇಳೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೋಡಿಯ ಪೋಷಕರನ್ನು ಕೂಡಲೇ ಕರೆಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ವಿಭಿನ್ನ ಧರ್ಮದ ಜೋಡಿಗೆ ರೆಸಾರ್ಟ್‌ನಲ್ಲಿ ಕೊಠಡಿ ನೀಡಿದವರ ವಿರುದ್ಧ ಕಠಿಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಆದರೆ, ಹಿಂದೂ ಸಂಘಟನೆಗಳ ಈ ಬೇಡಿಕೆಯನ್ನು ಪೊಲೀಸರು ಪುರಸ್ಕರಿಸಲಿಲ್ಲ. ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ, ಪೊಲೀಸರು ಯುವತಿಯರನ್ನು ಮಂಡ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ತಮ್ಮ ಬೇಡಿಕೆಗೆ ಮನ್ನಣೆ ನೀಡದೇ ಜೋಡಿಯನ್ನು ಕಳುಹಿಸಿಕೊಟ್ಟಿರುವುದಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

