ಕರಾವಳಿಯ ವಿದ್ಯುತ್ ಸಮಸ್ಯೆಗೆ ಸಿಗಲಿದೆ ಶಾಶ್ವತ ಪರಿಹಾರ

ಮೂಡುಬಿದಿರೆ : ಅವಿಭಜಿತ ದ. ಕ ಮತ್ತು ಉಡುಪಿ ಜಿಲ್ಲೆಗಳ ದೀರ್ಘಕಾಲದ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಉದ್ದೇಶಿಸಿರುವ ಕಡಂದಲೆ 400 ಕೆ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿಯನ್ನು ಜುಲೈ 15ರೊಳಗೆ ಪೂರ್ಣಗೊಳಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಬುಧವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಭೂವ್ಯಾಜ್ಯದ ಕಾರಣದಿಂದ ಸ್ಥಗಿತಗೊಂಡಿದ್ದ ಮೂಡಬಿದಿರೆ ತಾಲೂಕಿನ ಕಡಂದಲೆ ಗ್ರಾಮದ ಈ ಬೃಹತ್ ಯೋಜನೆಯ ಅಡೆತಡೆಗಳನ್ನು ಇಂಧನ ಸಚಿವರು ಹಾಗೂ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಸತತ ಪ್ರಯತ್ನದಿಂದ ನಿವಾರಿಸಲಾಗಿದ್ದು, ಈಗ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.
ಮಂಗಳೂರು, ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿರುವುದರಿಂದ ಇಲ್ಲಿಗೆ ತಡೆರಹಿತ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದ್ದು, ಮುಂಬರುವ ಮುಂಗಾರು ಮಳೆಯ ಅವಧಿಯಲ್ಲೇ ಈ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ವಿದ್ಯುತ್ ಪ್ರಸರಣ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಈ ಹೊಸ ಉಪಕೇಂದ್ರವು ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಪದೇ ಪದೇ ಎದುರಾಗುವ ವೋಲ್ಟೇಜ್ ವ್ಯತ್ಯಯ ಮತ್ತು ಕಡಿಮೆ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದೆ. ಅಲ್ಲದೆ, ಯಾವುದೇ ಒಂದು ವಿದ್ಯುತ್ ಸ್ಥಾವರದಲ್ಲಿ ತಾಂತ್ರಿಕ ದೋಷ ಉಂಟಾದರೂ, ಈ ಉಪಕೇಂದ್ರದ ಮೂಲಕ ತಕ್ಷಣವೇ ಪರ್ಯಾಯ ಮಾರ್ಗದಲ್ಲಿ ವಿದ್ಯುತ್ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೃಹತ್ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಸಲುವಾಗಿ ಮೇ 6 ರಿಂದ ಮೇ 24 ರವರೆಗೆ ಹಾಲಿ ಇರುವ ಯುಪಿಸಿಎಲ್-ಹೆಬ್ಬನಹಳ್ಳಿ ಪ್ರಸರಣ ಮಾರ್ಗದಲ್ಲಿ ‘ಲೈನ್ ಕ್ಲಿಯರ್’ (ಮಾರ್ಗ ಮುಕ್ತತೆ) ಪಡೆಯಲಾಗುತ್ತಿದೆ. ಈ ಅವಧಿಯಲ್ಲಿ ಪರ್ಯಾಯ ವ್ಯವಸ್ಥೆಗಳ ಮೂಲಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದರೂ, ತಾಂತ್ರಿಕ ಅನಿವಾರ್ಯತೆ ಉಂಟಾದಲ್ಲಿ ಮಾತ್ರ ಅತ್ಯಲ್ಪ ಸಮಯದವರೆಗೆ ಲೋಡ್ ಶೆಡ್ಡಿಂಗ್ ಮಾಡುವ ಸಾಧ್ಯತೆ ಇರುತ್ತದೆ. ಕರಾವಳಿಯ ಕೈಗಾರಿಕಾ ಪ್ರಗತಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೆತ್ತಿಕೊಂಡಿರುವ ಈ ಮಹತ್ವದ ಯೋಜನೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.
ಸರ್ಕಾರವು ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಉಪಕೇಂದ್ರವು ದಕ್ಷಿಣ ಕರ್ನಾಟಕದ ವಿದ್ಯುತ್ ಭದ್ರತೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ಇಂಧನ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

