ಬೆಂಗಳೂರು : ಯುವತಿಯ ವಿಚಾರವಾಗಿ ಉಂಟಾದ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಯುವಕನನ್ನು ಅಪಹರಿಸಿ, ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ Bengaluru ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಂಧಿತ ಆರೋಪಿಗಳನ್ನು ಅಫಾನ್, ಶಾಹಿದ್, ಅರ್ಫಾತ್, ಮೋಸಿನ್ ಹಾಗೂ ಅಲಿ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಸೂತ್ರಧಾರಿಗಳಾದ ಅಬ್ನಾನ್ ಮತ್ತು ಅಫ್ರೀದಿ ತಲೆಮರೆಸಿಕೊಂಡಿದ್ದಾರೆ. ಮೊಹಮ್ಮದ್ ರಫೀಕ್ ಹಲ್ಲೆಗೊಳಗಾದ ಯುವಕ.
ಪೊಲೀಸರ ಮಾಹಿತಿ ಪ್ರಕಾರ, ರಫೀಕ್ ಈ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಬಳಿಕ ಇಬ್ಬರ ಮಧ್ಯೆ ಬ್ರೇಕ್‌ಅಪ್ ಆಗಿತ್ತು. ನಂತರ ಆ ಯುವತಿ ಅಬ್ನಾನ್ ಎಂಬಾತನೊಂದಿಗೆ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದಳು ಎನ್ನಲಾಗಿದೆ.
ಮದುವೆ ಸಮೀಪಿಸುತ್ತಿದ್ದ ವೇಳೆ ರಫೀಕ್ ಮತ್ತೆ ಯುವತಿಯನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಈ ವಿಚಾರವಾಗಿ ಅಬ್ನಾನ್ ಮತ್ತು ರಫೀಕ್ ನಡುವೆ ಜಗಳ ನಡೆದಿದ್ದು, ತನಗೆ ಅವಮಾನವಾಗಿದೆ ಎಂದು ಅಬ್ನಾನ್ ತನ್ನ ಸ್ನೇಹಿತರಿಗೆ ಹೇಳಿಕೊಂಡಿದ್ದಾನೆ.
ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅಬ್ನಾನ್ ಹಾಗೂ ಅಫ್ರೀದಿ ಸೇರಿ ಗ್ಯಾಂಗ್ ಕಟ್ಟಿಕೊಂಡು ರಫೀಕ್‌ನನ್ನು ಟಾರ್ಗೆಟ್ ಮಾಡಿದ್ದಾರೆ. ದೇವನಹಳ್ಳಿ ಸಮೀಪ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಅಪಹರಿಸಿ, ಬಳಿಕ ಬಾಗಲೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಯ ಬಳಿಕ ತಪ್ಪಿಸಿಕೊಂಡ ರಫೀಕ್ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಬಾಗಲೂರು ಪೊಲೀಸರು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದು, ತನಿಖೆ ನಡೆಯುತ್ತಿದೆ.

