ಟ್ರಾನ್ಸ್‌ಫಾರ್ಮರ್ ಬಳಿ ಮೃತದೇಹ ಪತ್ತೆ : ವಿದ್ಯುತ್ ಶಾಕ್ ಶಂಕೆ

0
30

ಬಂಟ್ವಾಳ : ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಹರೀಶ್ ಟಿ. (38) ಎಂದು ಗುರುತಿಸಲಾಗಿದೆ. ಅವರು ಎಲೆಕ್ಟ್ರಿಷಿಯನ್ ವೃತ್ತಿ ಮಾಡಿಕೊಂಡಿದ್ದು, ಅವಿವಾಹಿತರಾಗಿದ್ದರು.

ಆ.16ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದ ಹರೀಶ್ ಅವರು ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಆ.17ರಂದು ಬೆಳಗ್ಗೆ 7 ಗಂಟೆಗೆ ಕುಟುಂಬಸ್ಥರು ಎದ್ದು ನೋಡಿದಾಗ ಅವರು ಮನೆಯಲ್ಲಿ ಇರಲಿಲ್ಲ.

ಈ ನಡುವೆ ಬೆಳಗ್ಗೆ ಸುಮಾರು 7.30ಕ್ಕೆ ಪುರುಷೋತ್ತಮ ಎಂಬವರು ಕುಟುಂಬಸ್ಥರಿಗೆ ಕರೆ ಮಾಡಿ, ತಂತ್ರಿಬೆಟ್ಟಿನ ಟ್ರಾನ್ಸ್‌ಫಾರ್ಮರ್ ಬಳಿ ಸದ್ದು ಕೇಳಿಸಿದ್ದು, ವಿದ್ಯುತ್ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹರೀಶ್ ಅವರ ಮೋಟಾರ್ ಸೈಕಲ್ ಅಲ್ಲಿ ಕಂಡುಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಹರೀಶ್ ಅವರು ಟ್ರಾನ್ಸ್‌ಫಾರ್ಮರ್ ಬಳಿ ಬಿದ್ದಿರುವ ಸಾಧ್ಯತೆ ಇರುವುದಾಗಿ ಮಾಹಿತಿ ನೀಡಿದ್ದಾರೆ.

ಕೂಡಲೇ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹರೀಶ್ ಅವರು ಟ್ರಾನ್ಸ್‌ಫಾರ್ಮರ್‌ನ ಕೆಳಭಾಗದಲ್ಲಿ ಬಿದ್ದಿರುವುದು ಕಂಡುಬಂದಿದೆ. ಪರಿಶೀಲಿಸಿದ ವೇಳೆ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.

ಬೆಳಗ್ಗೆ 6.30ರಿಂದ 7.30ರ ನಡುವಿನ ಅವಧಿಯಲ್ಲಿ ಹರೀಶ್ ಅವರು ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಶಾಕ್ ಹೊಡೆದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಈ ಕುರಿತು ಮೃತರ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.