ಆದರ್ಶ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ

0
119

ಉಡುಪಿ : ವಿಶ್ವ ಹೃದಯ ದಿನದ ಅಂಗವಾಗಿ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಬೃಹತ್​ ಹೃದಯ ತಪಾಸಣಾ ಶಿಬಿರ ರವಿವಾರ ಜರುಗಿತು.
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಶಿಬಿರ ಉದ್ಘಾಟಿಸಿ, ಯಾವುದೇ ರೋಗಗಳ ತಡೆಗೆ ಜಾಗೃತಿ ಅತ್ಯಂತ ಅಗತ್ಯ. ಆದರ್ಶ ಆಸ್ಪತ್ರೆಯು ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಆದರ್ಶ ಆಸ್ಪತ್ರೆಯ ಮ್ಯಾನೇಜಿಂಗ್​ ಡೈರೆಕ್ಟರ್​ ಡಾ. ಜಿ.ಎಸ್​. ಚಂದ್ರಶೇಖರ್​ ಪ್ರಸ್ತಾವಿಕವಾಗಿ ಮಾತನಾಡಿ, ಸೂಕ್ತ ದೇಹತೂಕ ನಿರ್ವಹಣೆ, ಮಧುಮೇಹ ನಿಯಂತ್ರಣ, ದಿನನಿತ್ಯದ ವ್ಯಾಯಾಮ, ಒತ್ತಡ ರಹಿತ ಜೀವನ ಹಾಗೂ ಸರಿಯಾದ ನಿದ್ರೆ ಹೃದಯದ ಆರೋಗ್ಯಕ್ಕೆ ಅತ್ಯಗತ್ಯ ಎಂದು ತಿಳಿಸಿದರು.

ಹೃದಯ ರೋಗ ತಜ್ಞ ಡಾ. ಸುಹಾಸ್​ ಜಿ.ಸಿ. ಮಾತನಾಡಿ, ಸಮತೋಲಿತ ಆಹಾರ, ನಿರಂತರ ವ್ಯಾಯಾಮ, ಅಗತ್ಯ ನಿದ್ರೆ ಮತ್ತು ವಿಶ್ರಾಂತಿ ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತವೆ. ಸಾರ್ವಜನಿಕರು ನಿಯಮಿತವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದರು.

ಹೃದಯ ರೋಗ ತಜ್ಞರಾದ ಡಾ. ಶ್ರೀಕಾಂತ್​ಕೃಷ್ಣ, ಡಾ. ವಿಶು ಕುಮಾರ್​ ಬಿ. ಹಾಗೂ ಕಾರ್ಡಿಯೋಥೊರಾಸಿಕ್​ ಮತ್ತು ವ್ಯಾಸ್ಕುಲರ್​ ಸರ್ಜನ್​ ಡಾ. ಗುರುಪ್ರಸಾದ್​ ಡಿ. ರೈ ಹೃದಯ ಆರೋಗ್ಯ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್​ ಉಪಸ್ಥಿತರಿದ್ದರು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆರ್​ಬಿಸಿ, ಇಸಿಜಿ, ಇಕೋ, ಟಿಎಂಟಿ ಹಾಗೂ ಲಿಪಿಡ್​ ಪ್ರೊಫೈಲ್​ ಪರೀಕ್ಷೆಗಳನ್ನು ನಡೆಸಲಾಯಿತು.