ಭಾರತ- ಐರ್ಲೆಂಡ್ ನಡುವಣ ಟಿ20 ಸರಣಿಗೆ ದಿನಗಣನೆ ಶುರುವಾಗಿದೆ. ಜೂನ್ 26 ರಿಂದ ಆರಂಭವಾಗಲಿರುವ ಈ ಸರಣಿಯ ಮೂಲಕ ಭಾರತೀಯ ಮೂಲದ ಆಟಗಾರನೊಬ್ಬ ಇಂಟರ್ನ್ಯಾಷನಲ್ ಕೆರಿಯರ್ ಆರಂಭಿಸಲು ಸಜ್ಜಾಗಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ವಿರುದ್ಧ ಎಂಬುದು ವಿಶೇಷ.
ಭಾರತದ ವಿರುದ್ಧದ ಸರಣಿಗೆ ಪ್ರಕಟಿಸಲಾದ ಐರ್ಲೆಂಡ್ ತಂಡದಲ್ಲಿ ರಾಜಸ್ಥಾನ್ ಮೂಲದ ಜೈ ಮುಂಧ್ರಾ ಕಾಣಿಸಿಕೊಂಡಿದ್ದಾರೆ. ಜನವರಿ 10, 1997 ರಂದು, ರಾಜಸ್ಥಾನದ ಜೈಪುರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಟೋಂಕ್ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಮುಂಧ್ರಾ ಬಾಲ್ಯದಲ್ಲಿ ಟೀಮ್ ಇಂಡಿಯಾ ಪರ ಆಡುವ ಕನಸು ಕಟ್ಟಿಕೊಂಡಿದ್ದರು.
ಇದಕ್ಕಾಗಿ ಮುಂಧ್ರಾ ಸ್ಥಳೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದರು. ಆದರೆ, ಕಾಲೇಜು ಶಿಕ್ಷಣದ ಬಳಿಕ ಅವರ ಬದುಕು ಹೊಸ ತಿರುವು ಪಡೆದುಕೊಂಡಿತು. 2021 ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಅವರು ಐರ್ಲೆಂಡ್‌ಗೆ ತೆರಳಿದರು.
ಐರ್ಲೆಂಡ್ನಲ್ಲಿ ಓದಿನ ನಡುವೆಯೂ ಕ್ರಿಕೆಟ್ ಮೇಲಿನ ಪ್ರೀತಿ ಬಿಡದ ಮುಂಧ್ರಾ, ಅಲ್ಲಿನ ಪ್ರಸಿದ್ಧ ‘ಲೈನ್ಸ್ಟರ್ ಕ್ರಿಕೆಟ್ ಕ್ಲಬ್’ ಪರ ದೇಶಿ ಕ್ರಿಕೆಟ್ ಆಡಲು ಆರಂಭಿಸಿದರು. ಆರಂಭದಲ್ಲಿ ಎಡಗೈ ಸ್ಪಿನ್ನರ್ ಹಾಗೂ ಬ್ಯಾಟರ್ ಆಗಿದ್ದ ಜೈ, ನಂತರ ಎಡಗೈ ವೇಗದ ಬೌಲರ್ ಆಗಿ ರೂಪಾಂತರಗೊಂಡರು.
2023 ರಲ್ಲಿ ‘ಲೈನ್ಸ್ಟರ್ ಕ್ರಿಕೆಟ್ ಕ್ಲಬ್’ ಐರಿಶ್ ಸೀನಿಯರ್ ಕಪ್ ಗೆಲ್ಲುವಲ್ಲಿ ಜೈ ಮುಂಧ್ರಾ ಪ್ರಮುಖ ಪಾತ್ರ ವಹಿಸಿದರು. ಇತ್ತೀಚೆಗೆ ನಡೆದ ಇಂಟರ್-ಪ್ರೊವಿನ್ಶಿಯಲ್ ಟಿ20 ಟ್ರೋಫಿಯಲ್ಲಿ ಲೈನ್ಸ್ಟರ್ ಲೈಟ್ನಿಂಗ್ ಪರ ಆಡಿದ ಅವರು, ಕೇವಲ 4 ಪಂದ್ಯಗಳಲ್ಲಿ 14.57 ರ ಭರ್ಜರಿ ಸರಾಸರಿಯಲ್ಲಿ 7 ವಿಕೆಟ್ ಕಬಳಿಸಿ ಆಯ್ಕೆಗಾರರ ಗಮನ ಸೆಳೆದಿದ್ದರು.
ಅತ್ತ ಇಂಟರ್-ಪ್ರೊವಿನ್ಶಿಯಲ್ ಟಿ20 ಟ್ರೋಫಿಯಲ್ಲಿ 7 ವಿಕೆಟ್ ಉರುಳಿಸಿ ಮಿಂಚಿದ್ದ ಮುಂಧ್ರಾ ಮೇಲೆ ಐರ್ಲೆಂಡ್ ಆಯ್ಕೆ ಸಮಿತಿ ಸದಸ್ಯರು ಕಣ್ಣಿಟ್ಟಿದ್ದರು. ಇದಾಗ್ಯೂ ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗುತ್ತೇನೆ ಎಂದು ಖುದ್ದು ಮುಂಧ್ರಾ ಕೂಡ ಅಂದುಕೊಂಡಿರಲಿಲ್ಲ.
ಆದರೆ ಇತ್ತ ಐರ್ಲೆಂಡ್ ತಂಡದ ಪ್ರಮುಖ ಬೌಲರ್‌ಗಳಾದ ಮಾರ್ಕ್ ಅಡೇರ್ ಮತ್ತು ಬ್ಯಾರಿ ಮೆಕಾರ್ಥಿ ಸೇರಿದಂತೆ ಐದು ಜನ ಆಟಗಾರರು ಗಾಯಗೊಂಡಿದ್ದರು. ಪ್ರಮುಖ ಆಟಗಾರರು ಗಾಯಾಳುಗಳಾಗಿ ಹೊರಬಿದ್ದ ಕಾರಣ ಆಯ್ಕೆಗಾರರು ಹೊಸ ಆಟಗಾರರತ್ತ ಮುಖ ಮಾಡಿದ್ದರು.
ಈ ವೇಳೆ ಕಾಣಿಸಿಕೊಂಡಿದ್ದೇ ಜೈ ಮುಂಧ್ರಾ. ಅತ್ತ 7 ವಿಕೆಟ್ ಪಡೆದು ಮಿಂಚಿದ್ದ ಮುಂಧ್ರಾ ಅವರನ್ನು ಆಂಡ್ರ್ಯೂ ವೈಟ್ ನೇತೃತ್ವದ ಸಮಿತಿಯು ಐರ್ಲೆಂಡ್ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಅದರಂತೆ ಇದೀಗ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದಾರೆ.
ಇದೀಗ ಐರ್ಲೆಂಡ್ ತಂಡದ ಪರ ಕಣಕ್ಕಿಳಿದ ಎರಡನೇ ಭಾರತೀಯ ಎನಿಸಿಕೊಳ್ಳಲು ಜೈ ಮುಂಧ್ರಾ ಸಜ್ಜಾಗಿ ನಿಂತಿದ್ದಾರೆ. ಅದರಂತೆ ಜುಲೈ 26 ರಂದು ನಡೆಯಲಿರುವ ಭಾರತ ಮತ್ತು ಐರ್ಲೆಂಡ್ ನಡುವಣ ಮ್ಯಾಚ್ನಲ್ಲಿ ಮುಂಧ್ರಾ ಕಣಕ್ಕಿಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

