
ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲಸಕ್ಕೆಂದು ಮನೆಯಿಂದ ಹೊರಟ 35 ವರ್ಷದ ಅರ್ಚನಾ ಎಂಬ ಮಹಿಳೆ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.
ಅರ್ಚನಾ ಅವರು ಸೆಪ್ಟೆಂಬರ್ 17ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಬಳಿಕ ಮನೆಗೆ ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಅವರು ರಾಘವೇಂದ್ರ (42) ಎಂಬ ವ್ಯಕ್ತಿಯೊಂದಿಗೆ ತೆರಳಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಪತ್ತೆಯಾಗಿರುವ ಅರ್ಚನಾ ಅವರು ಸುಮಾರು 5 ಅಡಿ ಎತ್ತರವಿದ್ದು, ದುಂಡು ಮುಖ ಹಾಗೂ ದಪ್ಪ ಶರೀರ ಹೊಂದಿದ್ದಾರೆ. ಕಾಣೆಯಾದ ದಿನ ಬಿಳಿ ಬಣ್ಣದ ಚುಕ್ಕೆಗಳಿರುವ ಚೂಡಿದಾರ ಧರಿಸಿದ್ದರು. ಅವರು ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಚನಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸುರತ್ಕಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
