ಮಂಗಳೂರು : ಅಗಲಿದ ಹಿರಿಯ ಯಕ್ಷಗಾನ ಕಲಾವಿದ, ಐತಿಹಾಸಿಕ ಕರ್ನಾಟಕ ಮೇಳದಲ್ಲಿ ಸುದೀರ್ಘ ತಿರುಗಾಟ ಮಾಡಿದ ನವರಸ ನಾಯಕ ಬೆಜ್ಜದಗುತ್ತು ದಿ. ಪುಳಿಂಚ ರಾಮಯ್ಯ ಶೆಟ್ಟರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ನೀಡಲಾಗುವ `ಪುಳಿಂಚ ಪ್ರಶಸ್ತಿ’ಗೆ ಈ ಬಾರಿ ಯಕ್ಷಗಾನದ ಮೂವರು ಪ್ರಸಿದ್ಧ ಕಲಾವಿದರು ಆಯ್ಕೆಯಾಗಿದ್ದಾರೆ. ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಗೋಣಿಬೀಡು ಸಂಜಯಕುಮಾರ್ ಶೆಟ್ಟಿ ಮತ್ತು ಮಿಜಾರು ತಿಮ್ಮಪ್ಪ ಅವರುಗಳನ್ನು ೨೦೨೩-೨೫ನೇ ಸಾಲಿನ ಪುಳಿಂಚ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪುಳಿಂಚ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು ಇದರ ಅಧ್ಯಕ್ಷÀರಾದ ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟಿ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ ದಿ. ಬಂಟ್ವಾಳ ಜಯರಾಮ ಆಚಾರ್ಯರಿಗೆ ಮರಣೋತ್ತರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.
ಬೋಳಾರ ಸುಬ್ಬಯ್ಯ ಶೆಟ್ಟಿ
ಕಾಸರಗೋಡು ಜಿಲ್ಲೆಯ ಮೂಡಂಬೈಲಿನಲ್ಲಿ ದಿ. ತ್ಯಾಂಪಣ್ಣ ಶೆಟ್ಟಿ ಮತ್ತು ಮಾನಕ್ಕೆ ದಂಪತಿಗೆ ೧೯೪೦ರಲ್ಲಿ ಜನಿಸಿದ ಸುಬ್ಬಯ್ಯ ಶೆಟ್ಟರು ಮುಂದೆ ಹೊಟೇಲ್ ವ್ಯಾಪಾರಕ್ಕಾಗಿ ಮಂಗಳೂರಿನ ಬೋಳಾರದಲ್ಲಿ ನೆಲೆಸಿ ಬೋಳಾರ ತಿಮ್ಮಯ್ಯ ಸುವರ್ಣರಿಂದ ಯಕ್ಷಗಾನ ನಾಟ್ಯ ಹಾಗೂ ಬೋಳಾರ ನಾರಾಯಣ ಶೆಟ್ಟರಲ್ಲಿ ಅರ್ಥಗಾರಿಕೆಯನ್ನು ಅಭ್ಯಸಿಸಿದರು. ಸುಂಕದಕಟ್ಟೆ, ಕದ್ರಿ, ಕರ್ನಾಟಕ, ಮಧೂರು, ಪುತ್ತೂರು, ಕುಂಟಾರು, ಬೆಂಕಿನಾಥೇಶ್ವರ ಮೇಳಗಳಲ್ಲಿ ಆರು ದಶಕಗಳ ಕಲಾಸೇವೆ ಮಾಡಿದ್ದಾರೆ. ಮಧುಕೈಟಭ, ಶುಂಭ, ಶೂರ್ಪನಖಿ, ಕೌರವ, ಅರ್ಜುನ ಮೊದಲಾದ ಪೌರಾಣಿಕ ಪಾತ್ರಗಳಲ್ಲದೆ ತುಳು ಪ್ರಸಂಗಗಳ ಪೆರುಮಳ, ಕೊಡ್ಸರಾಳ್ವ, ತಿಮ್ಮಣ್ಣಾಜಿಲ ಪಾತ್ರಗಳೂ ಅವರಿಗೆ ಖ್ಯಾತಿ ತಂದಿವೆ.
ಸAಜಯಕುಮಾರ ಶೆಟ್ಟಿ
ಚಿಕ್ಕಮಗಳೂರಿನ ಗೋಣಿಬೀಡಿನಲ್ಲಿ ದಿ. ಐತಪ್ಪ ಶೆಟ್ಟಿ ಮತ್ತು ಸುಂದರಿ ದಂಪತಿಗೆ ೧೯೬೦ರಲ್ಲಿ ಜನಿಸಿದ ಸಂಜಯಕುಮಾರ್ ಶೆಟ್ಟಿ ಕಲಿತದ್ದು ೧೦ನೇ ತರಗತಿ. ಪಡ್ರೆ ಚಂದು ಅವರಲ್ಲಿ ನಾಟ್ಯಾಭ್ಯಾಸ ಮಾಡಿ ಯಕ್ಷಗಾನದ ಸ್ತಿçÃವೇಷ ಮತ್ತು ಪುಂಡುವೇಷಗಳಲ್ಲಿ ಪರಿಣತರಾದರು. ಆದಿಸುಬ್ರಹ್ಮಣ್ಯ, ಪುತ್ತೂರು, ಸುರತ್ಕಲ್, ಕರ್ನಾಟಕ, ಕಾಟಿಪಳ್ಳ, ಮಂಗಳಾದೇವಿ, ಕುಂಟಾರು, ಬಪ್ಪನಾಡು, ಹೊಸನಗರ, ಎಡನೀರು ಮೇಳಗಳಲ್ಲಿ ನಾಲ್ಕು ದಶಕಗಳ ತಿರುಗಾಟ ಪೂರೈಸಿದ್ದಾರೆ. ಅಭಿಮನ್ಯು, ಲವಕುಶ, ಶ್ರೀಕೃಷ್ಣ, ಅಯ್ಯಪ್ಪ, ಸೀತೆ, ದ್ರೌಪದಿ, ಶ್ರೀದೇವಿ, ಚಂದ್ರಮತಿ, ಸುಭದ್ರೆ, ದಮಯಂತಿ, ದಾಕ್ಷಾಯಿಣಿ, ಮೇನಕೆ, ಭ್ರಮರಕುಂತಳೆ ಮೊದಲಾದ ಪಾತ್ರಗಳಲ್ಲಿ ಅವರು ಜನಪ್ರಿಯತೆ ಗಳಿಸಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮುಂಬಯಿ ಅಭಿಮಾನಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳಿAದ ಮಾನ-ಸಮ್ಮಾನಗಳನ್ನೂ ಪಡೆದಿದ್ದಾರೆ.
ಮಿಜಾರು ತಿಮ್ಮಪ್ಪ
ಬಡಗ ಎಡಪದವು ಗ್ರಾಮದ ಮಿಜಾರಿನಲ್ಲಿ ಹೊನ್ನಯ್ಯ ಶೆಟ್ಟಿಗಾರ್ ಮತ್ತು ಸೀತಮ್ಮ ದಂಪತಿಗೆ ೧೯೬೩ರಲ್ಲಿ ಜನಿಸಿದ ಮಿಜಾರು ತಿಮ್ಮಪ್ಪ ಎಸ್‌ಎಸ್‌ಎಲ್‌ಸಿ ಓದಿದ್ದಾರೆ. ಸೋದರಮಾವ ಮುಚ್ಚೂರು ಹರೀಶ್ ಶೆಟ್ಟಿಗಾರ್ ಅವರಿಂದ ಹೆಜ್ಜೆಗಾರಿಕೆ ಕಲಿತು ಕರ್ನಾಟಕ ಮೇಳವನ್ನು ಸೇರಿ ದಿ. ಮಿಜಾರು ಅಣ್ಣಪ್ಪರ ಮಾರ್ಗದರ್ಶನದಿಂದ ಯಕ್ಷಗಾನದ ಹಾಸ್ಯಪಾತ್ರಗಳಲ್ಲಿ ಪ್ರೌಢಿಮೆ ಸಾಧಿಸಿದರು. ಪುತ್ತೂರು, ಅರುವ, ಬಪ್ಪನಾಡು, ಕರ್ನಾಟಕ, ಕುಂಟಾರು, ಎಡನೀರು, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಒಟ್ಟು ೩೫ ವರ್ಷಗಳ ತಿರುಗಾಟ ನಡೆಸಿದ್ದಾರೆ. ತುಳು-ಕನ್ನಡ ಪ್ರಸಂಗಗಳ ದಾರುಕ, ವಿಜಯ, ನಾರದ, ಬ್ರಹ್ಮ, ಪಯ್ಯಬೈದ್ಯ, ಉಸ್ಮಾನ್, ಲಿಂಗಪ್ಪಾಚಾರಿ ಮೊದಲಾದ ವಿಭಿನ್ನ ಪಾತ್ರಗಳಲ್ಲಿ ಹೆಸರು ಗಳಿಸಿದ್ದಾರೆ.
ದಿ. ಬಂಟ್ವಾಳ ಜಯರಾಮ ಆಚಾರ್ಯ
ಇತ್ತೀಚೆಗೆ ತನ್ನ ೬೭ನೇ ವಯಸ್ಸಿನಲ್ಲಿ ನಿಧನರಾದ ಬಂಟ್ವಾಳ ಜಯರಾಮ ಆಚಾರ್ಯರು ತೆಂಕುತಿಟ್ಟಿನ ಅಗ್ರಮಾನ್ಯ ಹಾಸ್ಯಗಾರರಲ್ಲಿ ಒಬ್ಬರು. ಬಂಟ್ವಾಳ ದಿ. ಗಣಪತಿ ಆಚಾರ್ಯ ಮತ್ತು ಭವಾನಿ ದಂಪತಿಗೆ ೧೯೫೭ರಲ್ಲಿ ಹುಟ್ಟಿದ ಅವರು ಯಕ್ಷಗಾನ ರಂಗದಲ್ಲಿ ೫೦ ವರ್ಷಗಳ ಕಲಾಸೇವೆ ಮಾಡಿದ್ದಾರೆ. ಏಳನೇ ತರಗತಿಗೆ ಓದು ನಿಲ್ಲಿಸಿ ಪಡ್ರೆ ಚಂದು ಅವರಿಂದ ನಾಟ್ಯ ಹಾಗೂ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರಿಂದ ಹಾಸ್ಯವೇಷದ ಸೂಕ್ಷö್ಮಗಳನ್ನು ಅಭ್ಯಸಿಸಿದರು. ಅಮ್ಟಾಡಿ, ಸುಂಕದಕಟ್ಟೆ, ಸೊರ್ನಾಡು, ಕಟೀಲು, ಪುತ್ತೂರು, ಕದ್ರಿ, ಕುಂಬ್ಳೆ, ಸುರತ್ಕಲ್, ಎಡನೀರು, ಹೊಸನಗರ, ಹನುಮಗಿರಿ ಹೀಗೆ ಹಲವು ಮೇಳಗಳಲ್ಲಿ ಸುದೀರ್ಘ ತಿರುಗಾಟ ನಡೆಸಿದ ಅನುಭವ ಅವರದು.
ಬಾಲಗೋಪಾಲದಿಂದ ಪ್ರಾರಂಭಿಸಿ ವಿಜಯ, ಮಕರಂದ, ದಾರುಕ, ಬಾಹುಕ, ರಕ್ಕಸದೂತ, ನಾರದ ಹಾಗೂ ಎಲ್ಲಾ ಕನ್ನಡ-ತುಳು ಪ್ರಸಂಗಗಳ ಹಾಸ್ಯಪಾತ್ರಗಳಲ್ಲಿ ಅವರು ಅಪಾರ ಜನಮೆಚ್ಚುಗೆ ಗಳಿಸಿದ್ದರು. ಪುಳಿಂಚ ಸೇವಾ ಪ್ರತಿಷ್ಠಾನವು ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಿದೆ.
ಮೇ ೪ರಂದು ಪ್ರಶಸ್ತಿ ಪ್ರದಾನ
ಪುಳಿಂಚ ಪ್ರಶಸ್ತಿ ಹಾಗೂ ಮರಣೋತ್ತರ ಪ್ರಶಸ್ತಿಗಳು ತಲಾ ರೂ. ೨೫,೦೦೦/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಸಲಕರಣೆಗಳನ್ನೊಳಗೊಂಡಿದೆ. ೨೦೨೫ ಮೇ ೪ರಂದು ಆದಿತ್ಯವಾರ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಕ್ಷೇತ್ರದ ಆಡಳಿತದಾರ ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟಿಯವರ ನೇತೃತ್ವದಲ್ಲಿ ನಡೆಯುವ ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ಮತ್ತು ತ್ರೆöÊಮಾಸಿಕ ಕೋಲೋತ್ಸವ ಸಂದರ್ಭ ಸಾಯಂಕಾಲ ನಡೆಯುವ ಧಾರ್ಮಿಕ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಶಸ್ತಿ ಆಯ್ಕೆ ಸಮಿತಿ ಸಲಹೆಗಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.