ನವದೆಹಲಿ : ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಜೂನ್ 30ರೊಳಗೆ e-KYC ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಸೌಲಭ್ಯ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ತೈಲ ಮಾರಾಟ ಕಂಪನಿಗಳು ಎಚ್ಚರಿಕೆ ನೀಡಿವೆ.
ದೇಶದಾದ್ಯಂತ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಹಾಗೂ ಸಬ್ಸಿಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಖಾತೆಯ ವಿವರಗಳನ್ನು ಪರಿಶೀಲಿಸಿ ಕಡ್ಡಾಯವಾಗಿ e-KYC ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಯೋಜನೆಯಡಿ ಅರ್ಹ ಕುಟುಂಬಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್ ರಿಫಿಲ್‌ಗೆ ₹300 ವರೆಗೆ ಸಹಾಯಧನ ನೀಡಲಾಗುತ್ತಿದೆ.
ಇಂಡೇನ್, ಭಾರತ್ ಗ್ಯಾಸ್ ಹಾಗೂ ಎಚ್‌ಪಿ ಗ್ಯಾಸ್ ಸಂಸ್ಥೆಗಳು ಈಗಾಗಲೇ ಗ್ರಾಹಕರಿಗೆ ಮಾಹಿತಿ ನೀಡಿದ್ದು, e-KYC ಪೂರ್ಣಗೊಳಿಸದ ಖಾತೆಗಳಿಗೆ ಸಬ್ಸಿಡಿ ಜಮೆಯಾಗುವಲ್ಲಿ ತೊಂದರೆ ಉಂಟಾಗಬಹುದು ಎಂದು ತಿಳಿಸಿವೆ.
ಗ್ರಾಹಕರು ತಮ್ಮ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ, ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅಥವಾ ಗ್ಯಾಸ್ ವಿತರಕರ ಬಳಿ ಇರುವ ಬಯೋಮೆಟ್ರಿಕ್ ಸಾಧನದ ಮೂಲಕ e-KYC ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಹಾಗೂ ಫೇಸ್ ದೃಢೀಕರಣದ ಮೂಲಕ ಕೆಲವೇ ನಿಮಿಷಗಳಲ್ಲಿ ಈ ಪ್ರಕ್ರಿಯೆ ಮುಗಿಸಬಹುದಾಗಿದೆ.
ಈಗಾಗಲೇ e-KYC ಪೂರ್ಣಗೊಳಿಸಿರುವ ಗ್ರಾಹಕರು ಮತ್ತೆ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ. ಆದರೆ ಇನ್ನೂ ಮಾಡಿಸದವರು ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ಕ್ರಮ ಕೈಗೊಳ್ಳುವುದು ಒಳಿತು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

