ಕಾರ್ಕಳ ಪರಶುರಾಮ ಪ್ರತಿಮೆ ಪುನರ್ ನಿರ್ಮಾಣಕ್ಕೆ ಸರಕಾರದಿಂದ ಕ್ರಮ: ಶುಭದರಾವ್

0
8

ಕಾರ್ಕಳದ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನ ಪ್ರತಿಮೆ ಪುನರ್ ನಿರ್ಮಾಣ ಹಾಗೂ ಪಾರ್ಕ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈ ಸಂಬಂಧ ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ವಿಶೇಷ ಸಭೆ ನಡೆದಿದ್ದು, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತಿಳಿಸಿದರು.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ನೀಡಿದ ಮಾರ್ಗದರ್ಶನದಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರತಿಮೆ ಪುನರ್ ನಿರ್ಮಾಣಕ್ಕೆ ತಾಂತ್ರಿಕ ಪರಿಣಿತರ ಸಲಹೆ ಪಡೆಯುವುದು, ಥೀಮ್ ಪಾರ್ಕ್‌ಗೆ ಸಂಬಂಧಿಸಿದ ಗೋಮಾಳ ಜಮೀನನ್ನು ಪಾರ್ಕ್ ಹೆಸರಿಗೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ಕಾಮಗಾರಿಯನ್ನು ಪಾರದರ್ಶಕವಾಗಿ ನಡೆಸಲು ಹೊಸದಾಗಿ ಟೆಂಡರ್ ಕರೆಯುವುದು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿಯೂ ಉಪಸ್ಥಿತರಿದ್ದರು ಎಂದರು.

ಥೀಮ್ ಪಾರ್ಕ್ ವಿಚಾರವಾಗಿ ವಿಕಾಸಸೌಧದಲ್ಲಿ ಸಭೆ ನಡೆಯುತ್ತಿದ್ದಂತೆಯೇ ಕಾರ್ಕಳ ಶಾಸಕರ ಆಪ್ತರ ಸಾಮಾಜಿಕ ಜಾಲತಾಣಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಿಂದ ಕಾರ್ಕಳಕ್ಕೆ ವಾಹನ ಜಾಥ ನಡೆಸುವ ಪೋಸ್ಟರ್‌ಗಳು ಹರಿದಾಡುತ್ತಿವೆ. ಈ ಹಿಂದೆ ಎರಡು ಬಾರಿ ವಾಹನ ಜಾಥ ಆಯೋಜಿಸಲು ಪ್ರಯತ್ನಿಸಿ ಜನಬೆಂಬಲದ ಕೊರತೆಯಿಂದ ರದ್ದುಪಡಿಸಲಾಗಿತ್ತು. ಇದೀಗ ಸರ್ಕಾರದ ಸಭೆಯ ನಿರ್ಧಾರವನ್ನು ತಮ್ಮ ಹೋರಾಟದ ಫಲವೆಂದು ಬಿಂಬಿಸಲು ಜಾಥ ಆಯೋಜಿಸಲಾಗುತ್ತಿದೆ ಎಂದು ಶುಭದರಾವ್ ಆರೋಪಿಸಿದರು.

2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಮ್ಮಿಕಲ್ ಬೆಟ್ಟದಲ್ಲಿ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ ಎಂದು ಹೇಳಿ ಉದ್ಘಾಟನೆ ನಡೆಸಲಾಗಿತ್ತು. ಆದರೆ ಪ್ರತಿಮೆಯ ಸ್ವರೂಪದ ಕುರಿತು ವಿವಾದ ಉಂಟಾದ ಬಳಿಕ ಅದನ್ನು ಪ್ರಶ್ನಿಸಿದ ಹೋರಾಟಗಾರರು ಹಾಗೂ ಕಾರ್ಯಕರ್ತರನ್ನು ಅವಮಾನಿಸಿ ಅಪಹಾಸ್ಯ ಮಾಡಲಾಗಿತ್ತು. ಈ ವಿಚಾರವಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರದ ಇತ್ತೀಚಿನ ನಿರ್ಧಾರದಿಂದ ಹೋರಾಟಕ್ಕೆ ಮತ್ತೊಂದು ಹಂತದ ಜಯ ಸಿಕ್ಕಂತಾಗಿದೆ ಎಂದರು.

ಪ್ರಶ್ನಿಸಿದವರ ವಿರುದ್ಧ ಪೊಲೀಸ್ ಪ್ರಕರಣಗಳು, ಅಧಿಕಾರಿಗಳು ಅನುಭವಿಸಿದ ಒತ್ತಡ ಹಾಗೂ ಕಾರ್ಯಕರ್ತರ ನಡುವಿನ ಸಂಘರ್ಷಗಳಿಗೆ ಅಂತ್ಯ ಹಾಡುವ ಕಾಲ ಬಂದಿದೆ. ಸರ್ಕಾರದ ನಿರ್ಧಾರಕ್ಕೆ ಶಾಸಕರು ಮತ್ತು ಅವರ ಆಪ್ತರು ಅಡ್ಡಿಪಡಿಸದೆ ಸಹಕರಿಸಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಪುರಸಭೆಯ ಮಾಜಿ ಅಧ್ಯಕ್ಷ ಸುಬಿತ್ ಕುಮಾರ್ ಎನ್.ಆರ್., ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ, ಮಾಜಿ ಸದಸ್ಯ ವಿವೇಕಾನಂದ ಶೆಣೈ ಹಾಗೂ ಕೆಎಂಎಫ್ ಮಂಗಳೂರು ನಿರ್ದೇಶಕ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.