ಕಾರ್ಕಳ: ಜಪಾನ್‌ನ ಟೋಕಿಯೊದಲ್ಲಿ ಇದೇ 15ರಿಂದ 21ರ ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ಕಾರ್ಕಳದ ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ.
ಕಾರ್ಕಳ ತಾಲ್ಲೂಕಿನ ಕುಕ್ಕುಜೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ಪ್ರಸ್ತುತಪಡಿಸಿದ ಫ್ಲಡ್ ಡಿಟೆಕ್ಟರ್ ಪೋಲ್ ಮತ್ತು ನಿಕಿತಾ ಮೂಲ್ಯ ಅವರ ರೋಪೋ ಮೀಟರ್ ಅನ್ವೇಷಣೆಯು 2024ರ ಸೆಪ್ಟೆಂಬರ್ 21 ರಂದು ದೆಹಲಿಯಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಇನ್‌ಸ್ಪೈರ್ ಸ್ಪರ್ಧೆಯಲ್ಲಿ ಆಯ್ಕೆಯಾಗಿತ್ತು. ಶಿಕ್ಷಕ ಸುರೇಶ್ ಮರಕಾಲ ಅವರು ಮಾರ್ಗದರ್ಶನ ನೀಡಿದ್ದರು.
ಅಮೂಲ್ಯ ಹೆಗ್ಡೆ ಉಡುಪಿ ತಾಲ್ಲೂಕಿನ ಬೈರಂಪಳ್ಳಿ ಗ್ರಾಮದ ಅರುಣ ಹೆಗ್ಡೆ ಮತ್ತು ಅನಿತಾ ಹೆಗ್ಡೆ ದಂಪತಿ ಪುತ್ರಿಯಾಗಿದ್ದು, ಪ್ರಸ್ತುತ ಹೆಬ್ರಿ ಅಮೃತ ಭಾರತಿಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ.
ನಿಕಿತಾ ಮೂಲ್ಯ ಅವರು ಬೈರಂಪಳ್ಳಿಯ ಕೃಷ್ಣ ಮೂಲ್ಯ ಮತ್ತು ವನಿತಾ ಮೂಲ್ಯ ದಂಪತಿಯ ಪುತ್ರಿಯಾಗಿದ್ದಾರೆ. ಇವರು ಪ್ರಸ್ತುತ ಕಾರ್ಕಳ ಭುವನೇಂದ್ರ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ.
‘ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 300 ಮಂದಿ ಪಾಲ್ಗೊಂಡಿದ್ದರು. ಅದರಲ್ಲಿ 30 ಮಂದಿ ಆಯ್ಕೆಯಾಗಿದ್ದರು. ನನ್ನ ‘ಫ್ಲಡ್ ಡಿಟೆಕ್ಟರ್ ಪೋಲ್’ ಅನ್ವೇಷಣೆಗೆ ಕಂಚಿನ ಪದಕ ಸಿಕ್ಕಿತ್ತು. ಪ್ರವಾಹ ಬರುವಾಗ ಎಚ್ಚರಿಕೆ ನೀಡುವ ಮೂಲಕ ಜನ, ಜಾನುವಾರುಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ‘ಫ್ಲಡ್ ಡಿಟೆಕ್ಟರ್ ಪೋಲ್’ ಅನ್ವೇಷಣೆ ಮಾಡಲಾಗಿದೆ. ಮುಂದೆ ಐಪಿಎಸ್ ಅಧಿಕಾರಿಯಾಗುವಾಸೆ ಇದೆ’ ಎಂದು ಅಮೂಲ್ಯ ಹೆಗ್ಡೆ ತಿಳಿಸಿದರು.
‘ರೋಪೊ ಮೀಟರ್ ಎಲೆಕ್ಟ್ರಿಕಲ್ ಅಂಗಡಿಗಳಲ್ಲಿ ವಯರ್ ಅಳತೆ ಮಾಡಲು ಸಹಕಾರಿಯಾಗಿದೆ. ಇದು ವಯರ್ ಅನ್ನು ಕರಾರುವಕ್ಕಾಗಿ ಅಳತೆ ಮಾಡುತ್ತದೆ. ಈ ಅನ್ವೇಷಣೆಯು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಗಮನ ಸೆಳೆದಿತ್ತು. ಮುಂದೆ ವೈದ್ಯೆಯಾಗುವಾಸೆ ಇದೆ’ ಎಂದು ನಿಕಿತಾ ಮೂಲ್ಯ ಹೇಳಿದ್ದಾರೆ.