ಆಲಂಕಾರು ಗ್ರಾಮದ ನೆಕ್ಕರೆಯಲ್ಲಿಯ ಅಣ್ಣಪ್ಪ ದೈವದ ಗುಡಿಯ ಬಾಗಿಲನ್ನು ಮುರಿದು ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಲಂಕಾರು ಗುತ್ತು ಮನೆಯ ಎಸ್.ಡಿ. ಕೀರ್ತಿ ಅವರು ರಾತ್ರಿ ವೇಳೆ ದೈವಸ್ಥಾನದ ಬಳಿ ಹೋದಾಗ ಅಲ್ಲಿ ಓರ್ವ ವ್ಯಕ್ತಿಯು ದೈವಸ್ಥಾನದ ಬಾಗಿಲಿನ ಬೀಗವನ್ನು ಒಡೆದು ಅಲ್ಲಿ ಜಾಲಾಡಿ ಏನೂ ಸಿಗದೆ, ಕಾಣಿಕೆ ಡಬ್ಬಿಯನ್ನು ಒಡೆಯಲು ಪ್ರಯತ್ನಿಸುತ್ತಿದ್ದನು. ಕೀರ್ತಿ ಅವರು ಕೂಡಲೇ ತನ್ನ ಪರಿಚಿತರೊಬ್ಬರಿಗೆ ಕರೆ ಮಾಡಿ ದೈವಸ್ಥಾನದ ಬಳಿ ಬರುವಂತೆ ತಿಳಿಸಿ ಕಳ್ಳನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದರು.
ವಿಚಾರಿಸಿದಾಗ ಈತ ಗದಗ ಮೂಲದ ಹನುಮಂತರಾಯ ಯಾನೆ ಗೌಡನಗೌಡ ಎಂದು ತಿಳಿದು ಬಂದಿದೆ. ಬಳಿಕ ಆತನನ್ನು ಕಡಬ ಪೊಲೀಸರಿಗೆ ಒಪ್ಪಿಸಿದಾಗ ಕಳ್ಳತನ ಮಾಡಲು ಯತ್ನಿಸಿರುವುದಾಗಿ ಒಪ್ಪಿ ಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.