ಶೈಕ್ಷಣಿಕ ಸಾಧನೆ ಮಾಡಿದ ವಿವಿಧ ವಿಭಾಗಗಳ 616 ವಿದ್ಯಾರ್ಥಿಗಳಿಗೆ ಸನ್ಮಾನ
ಮಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಂಗಳೂರು ಕ್ಯಾಂಪಸ್ ನ 32ನೇ ಘಟಿಕೋತ್ಸವ ಸಮಾರಂಭವನ್ನು ಮೇ 24, 2025ರ ಶನಿವಾರದಂದು ಆಯೋಜಿಸಲಾಗಿದೆ. ನಗರದ ಎಂಜಿ ರಸ್ತೆಯಲ್ಲಿನ ಡಾ. ಟಿಎಂಎ ಪೈ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಮಧ್ಯಾಹ್ನ 3:00 ಗಂಟೆಗೆ ಸಮಾರಂಭ ಪ್ರಾರಂಭಗೊಳ್ಳಲಿದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಗೌರವಾನ್ವಿತ ಅಧ್ಯಕ್ಷರಾದ ಡಾ. ಅಭಿಜತ್ ಶೇಠ್ ಅವರು ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ , ಉಪ ಕುಲಪತಿ ಲೆ. ಜ. (ಡಾ) ಎಂ.ಡಿ. ವೆಂಕಟೇಶ್, ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ. ರಾವ್, ಸಹ ಉಪಕುಲಪತಿ (ಮಾಹೆ ಮಂಗಳೂರು) ಡಾ. ದಿಲೀಪ್ ಜಿ. ನಾಯ್ಕ್, ಸಹ ಉಪಕುಲಪತಿ (ತಂತ್ರಜ್ಞಾನ ಮತ್ತು ವಿಜ್ಞಾನ) ಡಾ. ನಾರಾಯಣ ಸಭಾಹಿತ್, ಕುಲಸಚಿವರು ಡಾ. ಪಿ. ಗಿರಿಧರ ಕಿಣಿ, ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ. ಉನ್ನಿಕೃಷ್ಣನ್ ಮತ್ತು ಮಂಗಳೂರಿನ ಮಣಿಪಾಲ ದಂತ ವಿಜ್ಞಾನ ಕಾಲೇಜಿನ ಡೀನ್ ಡಾ. ಆಶಿತಾ ಉಪ್ಪೂರ್ ಈ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಘಟಿಕೋತ್ಸವಕ್ಕೆ ಇನ್ನೇನು ಕೆಲವೇ ದಿನಗಳಿದ್ದು, ಆ ಸಂಭ್ರಮದ ಕ್ಷಣಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಮಾಹೆ ಮಂಗಳೂರು ಸಹ ಉಪಕುಲಪತಿ ಡಾ. ದಿಲೀಪ್ ಜಿ. ನಾಯ್ಕ್, ‘ಘಟಿಕೋತ್ಸವ ಎನ್ನುವುದು ಯಾವಾಗಲೂ ಎಲ್ಲರಿಗೂ ಒಂದು ವಿಶೇಷ ದಿನ. ಇದು ಒಂದು ಸಮಾರಂಭಕ್ಕಿಂತ ಹೆಚ್ಚಿನದಾಗಿರುತ್ತದೆ. ಇದು ನಮ್ಮ ವಿದ್ಯಾರ್ಥಿಗಳ ಸಮರ್ಪಣೆ, ತಡೆದುಕೊಳ್ಳುವ ಬಲ ಮತ್ತು ಅಭಿವೃದ್ಧಿಯ ಸಂಭ್ರಮಾಚರಣೆಯಾಗಿದೆ. ಒಂದೊಳ್ಳೆ ಉದ್ದೇಶ ಮತ್ತು ಆತ್ಮವಿಶ್ವಾಸದೊಂದಿಗೆ ಜಗತ್ತಿನೊಂದಿಗೆ ಹೆಜ್ಜೆ ಹಾಕುವುದನ್ನು ನೋಡುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ವಿದ್ಯಾರ್ಥಿಗಳ ಕುಟುಂಬಗಳು, ಅಧ್ಯಾಪಕರು ಮತ್ತು ಸಮಗ್ರ ಮಾಹೆ ಸಮುದಾಯಕ್ಕೆ ಇದೊಂದು ಸಂಭ್ರಮದ ಸಂದರ್ಭವಾಗಿರುತ್ತದೆ.’ ಎಂದರು.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ. ಉನ್ನಿಕೃಷ್ಣನ್, ‘ಘಟಿಕೋತ್ಸವವು ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣ ಮತ್ತು ಅವರನ್ನು ರೂಪಿಸಿದ ಮೌಲ್ಯಗಳ ಪ್ರತಿಫಲನದ ಸಮಯವಾಗಿದೆ. ಭವಿಷ್ಯದಲ್ಲಿ ಅವರು ಎತ್ತರಕ್ಕೆ ಬೆಳೆದಂತೆ ಮಾಹೆ ಪ್ರತಿಪಾದಿಸುವ ಕೌತುಕತೆ ಮತ್ತು ಕಾರುಣ್ಯವನ್ನು ತಮ್ಮೊಂದಿಗೆ ಒಳಗೂಡಿಸಿಕೊಂಡು ಮುನ್ನಡೆಯುತ್ತಾರೆ ಎನ್ನುವ ವಿಶ್ವಾಸ ನನಗಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರಿನ MCODSನ ಡೀನ್ ಡಾ. ಆಶಿತಾ ಉಪ್ಪೂರ್, ‘ನಮ್ಮ ವಿದ್ಯಾರ್ಥಿಗಳು ಕೇವಲ ಪದವಿಯೊಂದಿಗೆ ಇಲ್ಲಿಂದ ಹೊರಗೆ ಕಾಲಿಡುತ್ತಿಲ್ಲ, ಅದರ ಜೊತೆಗೆ ಒಂದು ಉತ್ತಮ ಉದ್ದೇಶ ಮತ್ತು ವೃತ್ತಿಪರ ಮನಸ್ಥಿತಿಯೊಂದಿಗೆ ಹೊರಗುತ್ತಿದ್ದಾರೆ.ಜವಾಬ್ದಾರಿಯುತ ಆರೋಗ್ಯ ಸೇವಕರಾಗಿ ಅವರು ಈ ಸಮಾಜಕ್ಕೆ ಕೊಡುಗೆ ನೀಡುವ ಪ್ರಾರಂಭವೇ ಈ ಘಟಿಕೋತ್ಸವಾಗಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಪದವಿ, ಚಿನ್ನದ ಪದಕ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಗೌರವಗಳನ್ನು ಪ್ರದಾನ ಮಾಡಲಾಗುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಗುವುದು. ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಔಪಚಾರಿಕ ಪ್ರಮಾಣವಚನ ಸ್ವೀಕರಿಸುವುದು ಈ ಕಾರ್ಯಕ್ರಮದ ಹೆಮ್ಮೆ ಮತ್ತು ಸಾಧನೆಯ ಕ್ಷಣವಾಗಿರಲಿದೆ. ಈ ಮೂಲಕ ಒಂದು ಅಧ್ಯಾಯ ಮುಕ್ತಾಯಗೊಂಡು ಮತ್ತೊಂದು ಆರಂಭಗೊಳ್ಳಲಿದೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು:
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಒಂದು ಶ್ರೇಷ್ಠ ಸಂಸ್ಥೆಯಾಗಿದ್ದು, ಇದು ಸ್ವಾಯತ್ತ ವಿಶ್ವವಿದ್ಯಾಲಯವಾಗಿದೆ. ಮಾಹೆಯು ಮಣಿಪಾಲ್, ಮಂಗಳೂರು, ಬೆಂಗಳೂರು, ಜಮ್ಶೆಡ್‌ಪುರ ಮತ್ತು ದುಬೈನಲ್ಲಿರುವ ಕ್ಯಾಂಪಸ್‌ಗಳಲ್ಲಿ ಆರೋಗ್ಯ ವಿಜ್ಞಾನ (HS), ಮ್ಯಾನೇಜ್ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ (MLHS), ತಂತ್ರಜ್ಞಾನ ಮತ್ತು ವಿಜ್ಞಾನ (T&S) ವಿಭಾಗಗಳಲ್ಲಿ 400ಕ್ಕೂ ಹೆಚ್ಚು ವಿಶೇಷತೆಗನ್ನು ಹೊಂದಿದೆ. ಗಮನಾರ್ಹ ಶೈಕ್ಷಣಿಕ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಗಮನಾರ್ಹ ಸಂಶೋಧನಾ ಕೊಡುಗೆಗಳೊಂದಿಗೆ, ಮಾಹೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ಸಂಸ್ಥೆ ಎನ್ನುವ ಉನ್ನತ ಸ್ಥಾನಮಾನ ನೀಡಿದೆ. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯಲ್ಲಿ (NIRF) 4ನೇ ಸ್ಥಾನದಲ್ಲಿದೆ, ಮಾಹೆ ಒಳ್ಳೆಯ ಕಲಿಕೆ ಅನುಭವ ಮತ್ತು ಸುಂದರ ಕ್ಯಾಂಪಸ್ ಬಯಸುವ ವಿದ್ಯಾರ್ಥಿಗಳಿಗೆ ಹಾಗು ಪ್ರತಿಭಾನ್ವಿತರನ್ನು ಪ್ರತಿಭೆಯನ್ನು ಹುಡುಕುತ್ತಿರುವ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಾರ್ಪೊರೇಟ್‌ಗಳಿಗೆ ಆದ್ಯತೆಯ ಆಯ್ಕೆಯಾಗಿದೆ.