ಬಂಟ್ವಾಳ : ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿರುವ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಭಾರಿ ಕಳ್ಳತನ ಎಸಗಿದ್ದು, ಪುರಾತನ ಕಾಲದ ಅಮೂಲ್ಯ ಪೂಜಾ ಸಾಮಗ್ರಿಗಳು ಸೇರಿದಂತೆ ಸುಮಾರು ₹71.57 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ದೇವಸ್ಥಾನದ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿ, ದೇವರ ಪೂಜೆಗೆ ಬಳಸುತ್ತಿದ್ದ ಬೆಳ್ಳಿಯ ಸಾಮಗ್ರಿಗಳು, ಒಂದು ಕೊಪ್ಪರಿಗೆ, 10 ಬೆಳ್ಳಿ ದೀಪಗಳು, 10 ಹಿತ್ತಾಳೆಯ ಗಿಂಡಿ, 5 ಹಿತ್ತಾಳೆಯ ಹರಿವಾಣ, ತಾಮ್ರದ ಪಾತ್ರೆ, ಎರಡು ತಾಮ್ರದ ಕೊಡಪಾನ, ಒಂದು ತಾಮ್ರದ ಅಡ್ಡರ ಹಾಗೂ ಕೆಲವು ಸ್ಟೀಲ್ ಪಾತ್ರೆಗಳನ್ನು ಕಳವು ಮಾಡಿದ್ದಾರೆ.
ಕಳ್ಳತನದ ಸಂಪೂರ್ಣ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೂವರು ಕಳ್ಳರು ಗೋಣಿ ಚೀಲದಲ್ಲಿ ಪೂಜಾ ಸಾಮಗ್ರಿಗಳನ್ನು ತುಂಬಿಕೊಂಡು ಪರಾರಿಯಾಗುತ್ತಿರುವುದು ದಾಖಲಾಗಿದೆ. ಈ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಘಟನೆಯ ಕುರಿತು ದೇವಸ್ಥಾನಕ್ಕೆ ಸಂಬಂಧಿಸಿದ ಸುನಿಲ್ ಕುಮಾರ್ ಕೆ.ಎನ್. ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳುವಾದ ಪುರಾತನ ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ದೇವಸ್ಥಾನದಲ್ಲಿ ನಡೆದ ಈ ಕಳ್ಳತನದಿಂದ ಭಕ್ತರಲ್ಲಿ ಆತಂಕ ಮನೆಮಾಡಿದ್ದು, ಪುರಾತನ ಧಾರ್ಮಿಕ ಪರಂಪರೆಯ ವಸ್ತುಗಳನ್ನು ಕಳವು ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಳುವಾದ ವಸ್ತುಗಳನ್ನು ಮರುಪಡೆಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

