Saturday, April 19, 2025
Homeದೆಹಲಿಮೂಗುತಿಯಿಂದ ಬಯಲಾಯ್ತು ಕೊಲೆ ರಹಸ್ಯ: ಉದ್ಯಮಿ ಅರೆಸ್ಟ್‌

ಮೂಗುತಿಯಿಂದ ಬಯಲಾಯ್ತು ಕೊಲೆ ರಹಸ್ಯ: ಉದ್ಯಮಿ ಅರೆಸ್ಟ್‌


ನವದೆಹಲಿ: ಪತ್ನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಶವವನ್ನು ಚರಂಡಿಗೆಸೆಯಲಾಗಿತ್ತು. ಆದರೆ ಈ ಕೊಲೆ ಪ್ರಕರಣದಲ್ಲಿ ಮಹತ್ವದ ಸುಳಿವು ನೀಡಿದ್ದು, ಆಕೆ ಧರಿಸಿದ ಮೂಗುತಿ. ಇದು ಪೊಲೀಸರಿಗೆ ನಿಗೂಢ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಸಹಾಯ ಮಾಡಿದೆ.
ದೆಹಲಿಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಚರಂಡಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಆದರೆ ಈ ಸಾವು ಹೇಗೆ ಸಂಭವಿಸಿತ್ತು ಎಂದು ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಕೆ ಧರಿಸಿದ್ದ ಮೂಗುತ್ತಿ ಪ್ರಮುಖ ಸುಳಿವು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಜೊತೆ 20 ವರ್ಷಗಳ ಕಾಲ ಸಂಸಾರ ಮಾಡಿದ್ದ ಉದ್ಯಮಿ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿದ್ದು, ಅವರೇ ಆಕೆಯನ್ನು ಕೊಂದು ಶವವನ್ನು ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮಾರ್ಚ್ 15 ರಂದು, ದೆಹಲಿಯ ಚರಂಡಿಯಲ್ಲಿ ಬೆಡ್‌ಶೀಟ್‌ನಲ್ಲಿ ಸುತ್ತಿ ಕಲ್ಲು ಮತ್ತು ಸಿಮೆಂಟ್ ಚೀಲಕ್ಕೆ ಕಟ್ಟಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಪೊಲೀಸರು ಈ ಮಹಿಳೆಯ ಮೂಗಿನಲ್ಲಿದ್ದ ನತ್ತಿನ ಮೂಲಕ ಮಹಿಳೆ ಯಾರು ಎಂಬುದನ್ನು ಗುರುತಿಸಿದರು. ಅಲ್ಲದೇ ಇದು ಕೊಲೆ ರಹಸ್ಯವನ್ನು ಭೇದಿಸಲು ಅವರಿಗೆ ಸಹಾಯ ಮಾಡಿದೆ.

ಮಹಿಳೆಯ ಮೂಗಿನಲ್ಲಿದ್ದ ಮೂಗುತ್ತಿಯನ್ನು ಹಿಡಿದುಕೊಂಡು ಪೊಲೀಸರನ್ನು ದಕ್ಷಿಣ ದೆಹಲಿಯಲ್ಲಿರುವ ಆಭರಣ ಅಂಗಡಿಗೆ ಹೋಗಿದ್ದಾರೆ. ಅಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ, ಗುರುಗ್ರಾಮ್‌ನ ತೋಟದ ಮನೆಯಲ್ಲಿ ವಾಸಿಸುತ್ತಿದ್ದ ದೆಹಲಿಯ ಆಸ್ತಿ ಡೀಲರ್ ಅನಿಲ್ ಕುಮಾರ್ ಅವರು ಆ ಮೂಗುತ್ತಿಯನ್ನು ಖರೀದಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಆಭರಣ ಅಂಗಡಿಯಲ್ಲಿ ಮೂಗುತಿ ಖರೀದಿಸಿದ ಬಿಲ್ ಅನ್ನು ಉದ್ಯಮಿ ಹೆಸರಿನಲ್ಲಿ ನೀಡಲಾಗಿದೆ. ಮೃತ ಮಹಿಳೆಯನ್ನು 47 ವರ್ಷದ ಸೀಮಾ ಸಿಂಗ್ ಎಂದು ಗುರುತಿಸಲಾಗಿದೆ.

ಇದಾದ ನಂತರ ಪೊಲೀಸರು ಆರೋಪಿ ಕುಮಾರ್ ಅವರನ್ನು ಸಂಪರ್ಕಿಸಿದಾಗ ಮೃತ ಮಹಿಳೆ ಸೀಮಾ ಸಿಂಗ್ ಅವರ ಪತ್ನಿ ಎಂದು ತಿಳಿದು ಬಂದಿದೆ. ಅಲ್ಲದೇ ಪೊಲೀಸ್ ಅಧಿಕಾರಿಗಳು ನಿಮ್ಮ ಪತ್ನಿಯೊಂದಿಗೆ ಮಾತನಾಡಿ ಎಂದು ಆಕೆಗೆ ಹೇಳಿದಾಗ ಅವರು ತಮ್ಮ ಪತ್ನಿ ಫೋನ್ ಇಲ್ಲದೆ ವೃಂದಾವನಕ್ಕೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಇದು ಪೊಲೀಸರ ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ನಂತರ ಪೊಲೀಸರು ದ್ವಾರಕಾದಲ್ಲಿರುವ ಅನಿಲ್‌ ಕುಮಾರ್ ಅವರ ಕಚೇರಿಗೆ ಹೋಗಿದ್ದು,, ಅಲ್ಲಿ ಅವರ ಡೈರಿಯಲ್ಲಿ ಅವರ ಅತ್ತೆಯ ದೂರವಾಣಿ ನಂಬರ್ ಸಿಕ್ಕಿದೆ. ಆ ನಂಬರ್ ಮೂಲಕ ಸೀಮಾ ತವರು ಮನೆಯವರನ್ನು ಸಂಪರ್ಕಿಸಿದಾಗ ಸೀಮಾ ಸಿಂಗ್ ಅವರ ಸಹೋದರಿ ಬಬಿತಾ, ಸೀಮಾ ಅವರು ಮಾರ್ಚ್ 11 ರಿಂದ ಫೋನ್‌ನಲ್ಲಿ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅಲ್ಲಿ ಕುಟುಂಬವೂ ಮಗಳ ಬಗ್ಗೆ ಚಿಂತೆಗೀಡಾಗಿತ್ತು. ಆದರೆ ದೂರು ನೀಡಿರಲಿಲ್ಲ.

ಇತ್ತ ಬಬಿತಾ ಅವರು ಅಕ್ಕನ ಫೋನ್ ಕರೆಗೆ ಸಿಗುತ್ತಿಲ್ಲ ಎಂದು ಅನಿಲ್‌ಗೆ ಕರೆ ಮಾಡಿದಾಗ ಆತ, ಸೀಮಾ ಜೈಪುರದಲ್ಲಿದ್ದಾಳೆ ಮತ್ತು ಅವಳು ಮಾತನಾಡುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು ಎಂದು ಬಬಿತಾ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೇ ಸೀಮಾ ಚೇತರಿಸಿಕೊಂಡಾಗ ನಿಮಗೆ ದೂರವಾಣಿ ಕರೆ ಮಾಡುವುದಾಗಿ ಅವರು ಭರವಸೆ ನೀಡಿದ್ದರು ಎಂದು ಬಬಿತಾ ಅವರು ಹೇಳಿದ್ದಾರೆ. ಇದೇ ರೀತಿ ಇದು ಹಲವು ದಿನಗಳ ಕಾಲ ಮುಂದುವರೆದಿದೆ. ಹೀಗಾಗಿ ಸೀಮಾ ಕುಟುಂಬ ಪೊಲೀಸರ ಮೊರೆ ಹೋಗಲು ಮುಂದಾಗಿದ್ದರೂ ಅನಿಲ್ ನೀಡಿದ ಭರವಸೆ ಅವರನ್ನು ಪೊಲೀಸರ ಬಳಿ ಹೋಗದಂತೆ ಮಾಡಿತ್ತು.
ಇದಾದ ನಂತರ ಏಪ್ರಿಲ್ 1 ರಂದು, ಸೀಮಾ ತವರು ಮನೆಯವರನ್ನು ಮಹಿಳೆಯೊಬ್ಬರ ಶವವನ್ನು ಗುರುತಿಸಲು ಪೊಲೀಸರು ಕರೆಸಿದಾಗ ಅದು ಅವರದೇ ಶವ ಎಂಬುದು ಅವರಿಗೆ ತಿಳಿದು ಬಂದಿತು. ಒಂದು ದಿನದ ನಂತರ ಸೀಮಾ ಅವರ ಹಿರಿಯ ಮಗ ಕೂಡ ಶವವನ್ನು ತನ್ನ ತಾಯಿಯೆಂದು ಗುರುತಿಸಿದನು. ಸೀಮಾ ಸಿಂಗ್ ಅವರನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿ ಕುಟುಂಬ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸೀಮಾ ಪತಿ ಅನಿಲ್ ಹಾಗೂ ಕಾವಲುಗಾರ ಶಿವಶಂಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular