ಸುಳ್ಯ : ಶಿಕ್ಷಣ ಕ್ಷೇತ್ರ, ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಕೊಡುಗೆಗಾಗಿ ಶಿಕ್ಷಣ ತಜ್ಞೆ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಸಾಹಿತಿ ಡಾ. ಅನುರಾಧ ಕುರುಂಜಿ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026” ಘೋಷಿಸಲಾಗಿದೆ.
ಗಡಿನಾಡು ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಂಚಾಲಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಭವನ ಮತ್ತು ಗ್ರಂಥಾಲಯ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಮೂಲತಃ ಕುರುಂಜಿ ಮನೆತನದವರಾದ ಡಾ. ಅನುರಾಧ ಕುರುಂಜಿ ಅವರು ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು, ಪ್ರವೃತ್ತಿಯಲ್ಲಿ ತರಬೇತುದಾರರು, ಸಮಾಜಸೇವಕಿ, ಕವಯತ್ರಿ, ಲೇಖಕಿ ಹಾಗೂ ಅಸಂಖ್ಯಾತ ಕೃತಿಗಳ ರಚನೆಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜುಲೈ 26ರಂದು ನಡೆಯಲಿರುವ ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ವೇದಿಕೆಯಲ್ಲಿ ಡಾ. ಅನುರಾಧ ಕುರುಂಜಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಕುರಿತು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಅನುರಾಧ ಕುರುಂಜಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

