ವಸತಿ ಇಲಾಖೆ ಅಧಿಕಾರಿಗಳ ವಿರುದ್ಧ ಮತ್ತೊಂದು ದೂರು
ಬೆಂಗಳೂರು: ವಸತಿ ಯೋಜನೆಯ ಮನೆಗಳನ್ನ ಹಣ ಪಡೆದು ಹಂಚಿಕೆ ಮಾಡುತ್ತಿದ್ದಾರೆ ಎಂಬ ಆಳಂದ ಶಾಸಕ ಬಿ.ಆರ್. ಪಾಟೀಲ್ ಆರೋಪ, ರಾಜ್ಯ ರಾಜಕಾರಣದಲ್ಲಿ ಈಗಾಗಲೇ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಹೀಗಿರುವಾಗ ರಾಜ್ಯ ವಸತಿ ಇಲಾಖೆ ಅಧಿಕಾರಿಗಳ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಕಮಿಷನ್ಗಾಗಿ ವಸತಿ ಯೋಜನೆಯಲ್ಲಿ ಪ್ಯಾಕೇಜ್ ಟೆಂಡರ್ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ಸಿಎಂ ಸಿದ್ದರಾಮಯ್ಯಗೆ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಪಾಟೀಲ್, ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಪರಶುರಾಮ್ ವಿರುದ್ಧ ದೂರು ನೀಡಿದ್ದಾರೆ.
ಪ್ಯಾಕೇಜ್ ಟೆಂಡರ್ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಆದೇಶಿಸಿದ್ದಾರೆ. ಹೀಗಿದ್ದರೂ ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಸಿಎಂ ಆದೇಶವನ್ನೇ ಅಧಿಕಾರಿಗಳು ಧಿಕ್ಕರಿಸಿದ್ದಾರೆ. ಕಮಿಷನ್ಗಾಗಿ ತಮಗೆ ಬೇಕಾದವರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ಪ್ಯಾಕೇಜ್ ಟೆಂಡರ್ ನೀಡಿದ ಆರೋಪ ಮಾಡಲಾಗಿದೆ.
ಕೊಪ್ಪಳ, ಬಳ್ಳಾರಿ, ಧಾರವಾಡ, ಗದಗ, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ತುಮಕೂರು ಮತ್ತು ಮೈಸೂರು, ಕೊಡಗು ಹಾಗೂ ಬೆಂಗಳೂರು ಗ್ರಾಮಾಂತರ, ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಬೀದರ್ ಹೀಗೆ ಎರಡು ಅಥವಾ ಮೂರು ಜಿಲ್ಲೆಗಳ ಕಾಮಗಾರಿಗಳನ್ನು ಸೇರಿಸಿ ಪ್ಯಾಕೇಜ್ ಮಾಡಿ ಟೆಂಡರ್ ನೀಡಲಾಗಿದೆ. ಇದರಿಂದ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಅನ್ಯಾಯ ಆಗಿದೆ. ಕೂಡಲೇ ಪ್ಯಾಕೇಜ್ ಟೆಂಡರ್ ವಾಪಸ್ ಪಡೆಯುವಂತೆ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ಎಲ್ಲೆಲ್ಲಿ ಟೆಂಡರ್?
ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ 06 ಸ್ಥಳಗಳು 1 BHK – 12 ಯೂನಿಟ್ ಮತ್ತು 2 BHK – 12 ಯೂನಿಟ್ ವಸತಿ ಗೃಹಗಳ ನಿರ್ಮಾಣ-29 ಕೋಟಿ ರೂ.
ಧಾರವಾಡ ಮತ್ತು ಗದಗ ಜಿಲ್ಲೆಯ ವಿವಿಧ 03 ಸ್ಥಳಗಳು 1 BHK – 12 ಯೂನಿಟ್ ಮತ್ತು 2 BHK – 12 ಯೂನಿಟ್ ವಸತಿ ಗೃಹಗಳ ನಿರ್ಮಾಣ – 14 ಕೋಟಿ ರೂ.
ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ 04 ಸ್ಥಳಗಳು 1 BHK – 12 ಯೂನಿಟ್ ಮತ್ತು 2 BHK – 12 ಯೂನಿಟ್ ವಸತಿ ಗೃಹಗಳ ನಿರ್ಮಾಣ – 20 ಕೋಟಿ ರೂ.
ಹಾಸನ, ತುಮಕೂರು ಮತ್ತು ಮೈಸೂರು ಜಿಲ್ಲೆಯ ವಿವಿಧ 05 ಸ್ಥಳಗಳು 1 BHK – 12 ಯೂನಿಟ್ ಮತ್ತು 2 BHK – 12 ಯೂನಿಟ್ ವಸತಿ ಗೃಹಗಳ ನಿರ್ಮಾಣ – 24 ಕೋಟಿ ರೂ.
ಕೊಡಗು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿವಿಧ 02 ಸ್ಥಳಗಳಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಗಳ ನಿರ್ಮಾಣ – 8 ಕೋಟಿ ರೂ.
ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ವಿವಿಧ 02 ಸ್ಥಳಗಳಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ನಿರ್ಮಾಣ – 8 ಕೋಟಿ ರೂ.
ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ವಿವಿಧ 04 ಸ್ಥಳಗಳಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಗಳ ನಿರ್ಮಾಣ – 16 ಕೋಟಿ ರೂ.