ಮೂಡುಬಿದಿರೆ : ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ಮಾದರಿ ಸೋಲಾರ್ ಗ್ರಾಮವಾಗಿ ಆಯ್ಕೆಯಾಗಿದ್ದು, ಗ್ರಾಮಾಭಿವೃದ್ಧಿಗೆ ₹1 ಕೋಟಿ ಅನುದಾನ ದೊರೆಯಲಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ಸೋಲಾರ್ ಗ್ರಾಮವನ್ನು ಆಯ್ಕೆ ಮಾಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಜಿಲ್ಲೆಯ 13 ಗ್ರಾಮಗಳನ್ನು ಪರಿಗಣಿಸಲಾಗಿದ್ದು, ಅವುಗಳಲ್ಲಿ 2025ರ ಡಿಸೆಂಬರ್ 31ರವರೆಗೆ ಅಳವಡಿಸಲಾದ ಸೋಲಾರ್ ಘಟಕಗಳ ಸಾಮರ್ಥ್ಯ ಅತ್ಯಧಿಕವಾಗಿದ್ದ ಕಾರಣ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
2026ರ ಫೆಬ್ರವರಿಯಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತಿಗೆ ಗ್ರಾಮವನ್ನು ಅಧಿಕೃತವಾಗಿ ಮಾದರಿ ಸೋಲಾರ್ ಗ್ರಾಮ ಎಂದು ಘೋಷಿಸಲಾಗಿದೆ.
ಈ ಯೋಜನೆಯಡಿ ಗ್ರಾಮದ ಸಮಗ್ರ ಸೌರಶಕ್ತಿ ಅಭಿವೃದ್ಧಿಗೆ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಅನುಷ್ಠಾನ ಸಂಸ್ಥೆಗೆ ₹1 ಕೋಟಿ ಸಹಾಯಧನ ಬಿಡುಗಡೆ ಮಾಡಲಿದೆ. ಈ ಅನುದಾನದಿಂದ ಗ್ರಾಮದಲ್ಲಿ ಸೌರಶಕ್ತಿ ಬಳಕೆ, ವಿದ್ಯುತ್ ಉಳಿತಾಯ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
ಇದೇ ವೇಳೆ, ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ಕೂಡ ಈ ಯೋಜನೆಯಡಿ ಮಾದರಿ ಸೋಲಾರ್ ಗ್ರಾಮವಾಗಿ ಆಯ್ಕೆಯಾಗಿರುವುದಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

