ಎಸ್.ಡಿ.ಎಂ ಎಜುಕೇಶನಲ್ ಟ್ರಸ್ಟ್ (ರಿ) ಉಜಿರೆ : ಬೃಹತ್ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

0
4

ಉಜಿರೆ: ಬದಲಾದ ಕಾಲಘಟ್ಟದಲ್ಲಿ ಹಲವಾರು ಯೋಜನೆ ಮತ್ತು  ವ್ಯವಸ್ಥೆಗಳು ನಮಗೆ ತಲುಪುತ್ತಿವೆ. ನಾವೆಲ್ಲ ವಿದ್ಯಾವಂತರಾಗಿದ್ದೇವೆ. ಇಂತಹ ಪ್ರಬುದ್ಧತೆಯ ನಡುವೆ ಬೆಳೆದು ಬಂದ ಹಾದಿಯನ್ನು ಮರೆಯುವ ಕೀಳರಿಮೆ ನಮ್ಮಲ್ಲಿ ಬೆಳೆಯಬಾರದು. ವಿದ್ಯಾವಂತರು ವಿಚಾರವಂತರಾಗುವುದರ  ಜೊತೆಗೆ ಆಚಾರವಂತರಾಗಿ ಬದುಕಬೇಕು. ಕಲಿತ ವಿದ್ಯೆ ಆಚಾರವಾಗಿ ಮೂಡಿ ಬಂದಾಗ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ಇವರು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಭಾಂಗಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಹಾಗು ಮಾರ್ಗದರ್ಶನದಲ್ಲಿ ಎಸ್.ಡಿ.ಎಂ ಎಜ್ಯುಕೇಶನಲ್ ಟ್ರಸ್ಟ್(ರಿ) ವತಿಯಿಂದ ಕರ್ನಾಟಕದಾದ್ಯಂತ ಅರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡಮಾಡುವ ಬೃಹತ್ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದರು.

ಸ್ಕಾಲರ್ಶಿಪ್ ವಿತರಣೆ  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆರ್ಥಿಕವಾಗಿ ಸ್ಪಂದಿಸುವ ಸಮಯೋಚಿತ ಯೋಜನೆ. ಕ್ಷೇತ್ರವು ವಿದ್ಯಾರ್ಥಿಗಳ ಸಹಾಯಕ್ಕಾಗಿ ಸದಾ ನೆರವು ಮತ್ತು ಸಹಕಾರವನ್ನು ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳ ಜೊತೆಗೆ ಪೋಷಕ ಆರ್ಥಿಕ ಒತ್ತಡವನ್ನು ಸುಧಾರಿಸಲೂ ಅನುವು ಮಾಡಿಕೊಟ್ಟಿದೆ. ಈ ಯೋಜನೆಯ ಲಾಭ ಅರ್ಹ ವಿದ್ಯಾರ್ಥಿಗಳೆ ನೇರವಾಗಿ ಪಡೆದುಕೊಳ್ಳುತ್ತಿರುವುದು ವಿಶೇಷ. ಸಾವಿರಾರು ವಿದ್ಯಾರ್ಥಿಗಳು ಇಂತಹ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಬದುಕಿನದ್ದಕ್ಕೂ ತಮ್ಮ ಬೆಳವಣಿಗೆಗೆ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಿದ ಸಂಸ್ಥೆಯ ಮೇಲಿನ ಕೃತಜ್ಞತಾ ಭಾವವನ್ನು ಮರೆಯಬಾರದು. 

ಕ್ಷೇತ್ರವು ರಾಜ್ಯಾದ್ಯಂತ 56 ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣವನ್ನು ಹಲವು ದಶಕಗಳಿಂದ ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು. ಜವಾಬ್ದಾರಿಯುತ ಯುವ ಸಮುದಾಯ ನಾವಾದಾಗ ನಕರಾತ್ಮಕ ಚಿಂತನೆಗಳು ನಮ್ಮ ಬಳಿ ಸುಳಿಯುವುದಿಲ್ಲ. ಯುವ ಸಮುದಾಯ ಮಾದಕ ವ್ಯಸನದ ರುಚಿ ಹತ್ತಿಸುವವರ ಬಗ್ಗೆ ಎಚ್ಚರವಾಗಿರಬೇಕು. ಯುವಶಕ್ತಿಗಳನ್ನು ಸಮಾಜದ ಆಸ್ತಿಗಳಾಗಿ ಬೆಳಗಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಸೇರಿದಂತೆ ಶೈಕ್ಷಣಿಕ ಸಂಯೋಜಿತರಾದ ಪ್ರೋ. ಎಸ್. ಎನ್ ಕಾಕತ್ಕಾರ್ ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ್ ಟಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,  ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸಂಸ್ಥೆಯ ಶೈಕ್ಷಣಿಕ ಸಂಯೋಜಿತರಾದ ಪ್ರೋ. ಎಸ್. ಎನ್ ಕಾಕತ್ಕಾರ್ ಸ್ವಾಗತಿಸಿ, ಪ್ರಾಸ್ತವಿಕ ಮಾತಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ನಫಿಸತ್ ನಿರೂಪಿಸಿ, ಡೀನ್ ಸೌಮ್ಯ ಬಿ.ಪಿ ವಂದಿಸಿದರು.

4 ದಶಕಗಳಿಂದ ಮುಂದುವರಿಯುತ್ತಿರುವ ವಿಶಿಷ್ಟ ಯೋಜನೆ  :

ಎಸ್.ಡಿ.ಎಂ ಸಂಸ್ಥೆಯ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ

ಸಮಾಜಮುಖಿ ಚಿಂತನೆಯ ಫಲವಾಗಿ 1985 ರಿಂದ ಆರಂಭಗೊಂಡ ಈ ವಿಶಿಷ್ಟ ಯೋಜನೆಯೂ ಎಸ್.ಡಿ.ಎಂ ಎಜ್ಯುಕೇಶನಲ್ ಟ್ರಸ್ಟ್(ರಿ) ಮೂಲಕ ಕರ್ನಾಟಕದಾದ್ಯಂತ ಅರ್ಥಿಕವಾಗಿ ಹಿಂದುಳಿದ ಮತ್ತು ಎಲ್ಲಾ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಪ್ರತೀ ವರ್ಷ ಕೊಡಮಾಡುತ್ತಿದೆ.

ಒಂದು ವರೆ ಕೋಟಿಗೂ ಅಧಿಕ ಮೌಲ್ಯದ ಸ್ಕಾಲರ್ಶಿಪ್ :

2026ರ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಡಿ.ಎಂ ಎಜ್ಯುಕೇಶನಲ್ ಟ್ರಸ್ಟ್  ವತಿಯಿಂದ  1, 549 ವಿದ್ಯಾರ್ಥಿಗಳಿಗೆ  ಪ್ರತೀ  ತಿಂಗಳು ರೂ. 17, 49, 750 ರುಪಾಯಿಯಂತೆ  ವರ್ಷಕ್ಕೆ ಒಂದು ಕೋಟಿ ಎಪ್ಪತ್ತನಾಲ್ಕು ಲಕ್ಷ ತೊಂಬತ್ತ ಏಳು ಸಾವಿರದ ಐನೂರು (1,74,97,500) ರಷ್ಟು ವಿದ್ಯಾರ್ಥಿ ವೇತನವನ್ನು ರಾಜ್ಯಾದ್ಯಂತ ಇರುವ ಒಟ್ಟು 168 ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

160 ಕ್ಕೂ ಹೆಚ್ಚಿನ ಕಾಲೇಜುಗಳಿಗೆ ವಿದ್ಯಾರ್ಥಿವೇತನ ವಿತರಣೆ :

ಮೆಡಿಕಲ್ ಕೋರ್ಸ್ ಮಾಡುತ್ತಿರುವ 200 ವಿದ್ಯಾರ್ಥಿಗಳು, ಎಂಜಿನಿಯರಿಂಗ್ ವಿಭಾಗದ 563 ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿಭಾಗದ 273 ವಿದ್ಯಾರ್ಥಿಗಳು, ಐಟಿಐ ವಿಭಾಗದ 166 ವಿದ್ಯಾರ್ಥಿಗಳು, ಡಿಪ್ಲೊಮಾ ವಿಭಾಗದ 96 ವಿದ್ಯಾರ್ಥಿಗಳು ಸೇರಿದಂತೆ ಇತರೆ ಕಾನೂನು, ನರ್ಸಿಂಗ್, ಪಶು ವೈದ್ಯಕೀಯ, ಕೃಷಿ, ಫಿಸಿಯೋಥೆರಪಿ,  ಬಿಇಡ್ ವಿಭಾಗದಿಂದ 236 ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 1, 549 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ವೇತನವನ್ನು ಪ್ರತಿ ತಿಂಗಳು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.

1.”ಶಿಕ್ಷಣ ಎನ್ನುವುದು ಭವಿಷ್ಯವನ್ನು ರೂಪಿಸುವ ಅಡಿಪಾಯ. ಆ ಅಡಿಪಾಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಸ್‌.ಡಿ‌.ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿವೇತನ ನನಗೆ ಮಹತ್ತರ ಸಹಾಯವಾಗಿದೆ. ಈ ವಿದ್ಯಾರ್ಥಿವೇತನದಿಂದ ನನ್ನ ಓದಿನ ವೆಚ್ಚವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಿದ್ದು, ವಿದ್ಯಾಭ್ಯಾಸದ ಮೇಲೆ ಹೆಚ್ಚು ಗಮನಹರಿಸಲು ನೆರವಾಗಿದೆ. ವಿದ್ಯಾರ್ಥಿಗಳ ಕನಸುಗಳಿಗೆ ಬೆಂಬಲವಾಗಿ ನಿಂತಿರುವ ಈ ಯೋಜನೆ ನಿಜಕ್ಕೂ ಶ್ಲಾಘನೀಯ. ಈ ಅವಕಾಶಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ.”

– ಸುಜನಾ ಎಂ. ಈ

ಎಸ್.ಡಿ.ಎಂ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ

2.  ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಆತ್ಮವಿಶ್ವಾಸ ಮತ್ತು ಹೊಸ ಉತ್ಸಾಹವನ್ನು ತುಂಬುವ ಅಮೂಲ್ಯ ಯೋಜನೆಯಾಗಿದೆ. ಈ ಅಮೂಲ್ಯ ವಿದ್ಯಾರ್ಥಿವೇತನವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಲ ತುಂಬುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಹಾಗೂ ಧನ್ಯವಾದಗಳು.

 – ಕು. ಹರ್ಷಿತಾ

ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಉಜಿರೆ.