ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ನ ಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರವಾಸಿಗರು ಆ ಪ್ರದೇಶಕ್ಕೆ ಕುದುರೆ ಮೂಲಕ ಬಂದಿದ್ದಾರೆ. ಹಾಗಾದರೆ ಈ ಉಗ್ರರು ಹೇಗೆ ಬಂದ್ರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಪಹಲ್ಗಾಮ್ಗೆ ಒಂದೋ ಕುದುರೆ ಮೇಲೆ ಇಲ್ಲವೇ ನಡೆದುಕೊಂಡೇ ಬರಬೇಕು. ಅಲ್ಲಿ ವಾಹನಗಳ ತೆಗೆದುಕೊಂಡು ಹೋಗುವಂಥಾ ಸಾಮಾನ್ಯ ರಸ್ತೆಗಳೇ ಇಲ್ಲ.
ಉಗ್ರರು ಎಕೆ-47 ಜತೆಗೆ ಇತರೆ ಶಸ್ತ್ರಾಸ್ತ್ರಗಳ ಜತೆ ಸುಮಾರು 20-22 ಗಂಟೆಗಳ ಕಾಲ ಕಾಡಿನ ಮೂಲಕ ನಡೆದು ಬೈಸರನ್ ಕಣಿವೆ ತಲುಪಿದ್ದರು. ಬಳಿಕ ಪುರುಷರ ಪ್ಯಾಂಟ್ ಬಿಚ್ಚಿಸಿ ಕೇವಲ ಹಿಂದೂಗಳ ಮೇಲೆ ಗುಂಡು ಹಾರಿಸಿದ್ದಾರೆ. ಹಾಗೆಯೇ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರವಾಸಿಗರನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಭದ್ರತಾ ಪಡೆಗಳು ಭಯೋತ್ಪಾದಕರ ಹುಟುಕಾಟದಲ್ಲಿ ತೊಡಗಿದ್ದಾರೆ. ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ದೇಶಾದ್ಯಂತ ಜನರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ದಾಳಿಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ. ಗೃಹ ಸಚಿವಾಲಯದ ಆದೇಶದ ನಂತರ, ಎನ್ಐಎ ಅಧಿಕೃತವಾಗಿ ತನಿಖೆಯನ್ನು ಪ್ರಾರಂಭಿಸಿದೆ.
ದಾಳಿಯ ಸಮಯದಲ್ಲಿ ಭಯೋತ್ಪಾದಕರು ಎರಡು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ ಎಂದು ಮೂಲಗಳು ಆಜ್ತಕ್ಗೆ ತಿಳಿಸಿದೆ. ಒಂದು ಪ್ರವಾಸಿಗರಿಗೆ ಸೇರಿದ್ದು ಮತ್ತು ಇನ್ನೊಂದು ಸ್ಥಳೀಯ ನಿವಾಸಿಗೆ ಸೇರಿದ್ದು. ದಾಳಿಯಲ್ಲಿ ಒಟ್ಟು ನಾಲ್ವರು ಭಯೋತ್ಪಾದಕರು ಭಾಗಿಯಾಗಿದ್ದರು. ಅದರಲ್ಲಿ ಮೂವರು ಪಾಕಿಸ್ತಾನದವರಾಗಿದ್ದರೆ, ಒಬ್ಬ ಸ್ಥಳೀಯನಾಗಿದ್ದ. ಸ್ಥಳೀಯ ಭಯೋತ್ಪಾದಕನನ್ನು ಆದಿಲ್ ಥೋಕರ್ ಎಂದು ಗುರುತಿಸಲಾಗಿದೆ.
ಎನ್ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಭಯೋತ್ಪಾದಕರು ಈ ಘಟನೆಯನ್ನು ನಡೆಸುತ್ತಿದ್ದಾಗ, ಸ್ಥಳೀಯರೊಬ್ಬರು ಇಡೀ ದಾಳಿಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆ ಸಮಯದಲ್ಲಿ ಆತ ತನ್ನನ್ನು ತಾನು ಉಳಿಸಿಕೊಳ್ಳಲು ಮರವನ್ನು ಹತ್ತಿದ್ದ. ಈ ವೀಡಿಯೊ ತನಿಖೆಗೆ ಬಹಳ ಮಹತ್ವದ್ದಾಗಿದೆ. ಈ ವೀಡಿಯೊದ ಮೂಲಕ, ತನಿಖಾ ಸಂಸ್ಥೆಯು ದಾಳಿಯ ನಿಖರವಾದ ಸಮಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ಭಯೋತ್ಪಾದಕರನ್ನು ಗುರುತಿಸುವಲ್ಲಿಯೂ ಸಹಾಯ ಮಾಡುತ್ತದೆ.