ಕಾರವಾರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರರನ್ನು ಸದೆಬಡಿಯಲು ಭಾರತ ಸರ್ಕಾರ ಮತ್ತು ಯೋಧರು ಇಬ್ಬರು ಸಿದ್ಧರಾಗಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಬೇಟೆಗೆ ರಣರೋಚಕ ಆಕ್ರಮಣ್ ಆಪರೇಷನ್ ಕೂಡ ನಡೆಯುತ್ತಿದೆ. ಕರ್ನಾಟಕದ ಇಬ್ಬರು ವ್ಯಕ್ತಿ ದಾಳಿಯಲ್ಲಿ ಸಾಪ್ಪಿದ್ದಾರೆ. ಆದರೆ ಇದೇ ಪಹಲ್ಗಾಮ್ ಉಗ್ರರ ದಾಳಿಯಿಂದ ಶಿರಸಿಯ ಕುಟುಂಬವೊಂದು ಕೊಂಚದರಲ್ಲೇ ತಪ್ಪಿಸಿಕೊಂಡು ಬಂದಿದ್ದಾರೆ. ಪಹಲ್ಗಾಮ್‌ನಲ್ಲಿ ಕಣ್ಣಾರೆ ಕಂಡ ಆ ಭಯಾನಕ ಘಟನೆಯನ್ನು ಶಿರಸಿಯ ಪ್ರದೀಪ್ ಕುಟುಂಬ ಬಿಚ್ಚಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರಸಿಯ ಪ್ರದೀಪ ಹೆಗಡೆ ಕುಟುಂಬ ಏಪ್ರಿಲ್ 21 ರಂದು, ಪತ್ನಿ ಶುಭಾ ಮತ್ತು ಮಗ ಸಿದ್ಧಾಂತನ ಜೊತೆ ಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಕ್ಕೆ ತೆರಳಿದ್ದರು. 7ಕಿಮೀ ದೂರ ಪಹಲ್ಗಾಮ್ಗೆ ಗುಡ್ಡ ಹತ್ತಿ ತೆರಳಬೇಕು. ಹೀಗಾಗಿ ಕುದುರೆ ಹತ್ತಿ ಪ್ರದೀಪ್ ಕುಟುಂಬ ಹೊರಟ್ಟಿದ್ದರು.
ಕಾಶ್ಮೀರದಲ್ಲಿ ಎಲ್ಲೆಡೆ ಸೆಕ್ಯೂರಿಟಿ ಇದೆ. ಭೈಸರನ್ ಮೇಲ್ಭಾಗ, ಕೆಳಭಾಗ ಯಾಕೆ ಸೆಕ್ಯೂರಿಟಿ ಇಲ್ಲ ಎಂದು ನಾನು ಮತ್ತು ಶುಭಾ ಮಾತನಾಡಿಕೊಂಡಿದ್ದೇವು. ಭೈಸರನ್ ಕಾಡು ಪ್ರದೇಶದಿಂದ ಕೂಡಿದೆ. ಸುಮಾರು 15 ಎಕರೆ ಪ್ರದೇಶದಲ್ಲಿ ಸುತ್ತಾ ಬೇಲಿ ಹಾಕಲಾಗಿದೆ. ಘಟನಾ ಸ್ಥಳದಲ್ಲಿ ಫೋಟೊ ತೆಗೆದ ಬಳಿಕ ಅಲ್ಲೇ ಇನ್ನೊಂದು ಸ್ಥಳಕ್ಕೆ ತೆರಳಲು ಮುಂದಾದಾಗ ಪುತ್ರ ಸಿದ್ಧಾಂತ್ ತಿಂಡಿ ಬೇಕೆಂದಿದ್ದ. ಹಾಗಾಗಿ ತಿಂಡಿ ತಿನ್ನಲು ಹೋಗಿದ್ದೇ ನಮ್ಮ ಪಾಲಿನ ಅದೃಷ್ಟವಾಗಿತ್ತು ಎನ್ನುತ್ತಾರೆ.
ತಿಂಡಿ ತಿನ್ನುತ್ತಿದ್ದಂತೆ ಮತ್ತೊಂದು ಕಡೆಯಲ್ಲಿ ಏನೋ ಸದ್ದು ಕೇಳಿಸಿತ್ತು. ಹೋಟೆಲ್‌ನವರು ಪಟಾಕಿ ಆಗಿರಬಹುದು ಅಂದಿದ್ದರು. ನಾವು ಫೋಟೊ ತೆಗೆಯುತ್ತಿದ್ದ ಸ್ಥಳದಿಂದ ಓರ್ವ ಗನ್ ಫೈರ್ ಮಾಡುತ್ತಾ ಬರುತ್ತಿದ್ದು, ಓರ್ವನಿಗೆ ಶೂಟ್ ಮಾಡಿದ್ದು ಕಂಡಿತ್ತು. ಏನೂ ಗೊತ್ತಾಗದೇ ಸ್ಥಳದಲ್ಲೇ ಮಲಗಿಕೊಂಡೆವು. ಈ ನಡುವೆ ಪತ್ನಿ ಬ್ಯಾಗ್ ಎತ್ತಿಕೊಳ್ಳಲು ಪ್ರಯತ್ನಿಸಿದಾಗ ಬುಲೆಟ್ ಕಿವಿ ಪಕ್ಕದಲ್ಲೇ ಪಾಸಾಗಿತ್ತು ಎಂದರು.
ಸ್ಥಳೀಯರು ಬಂದು ಓಡಲು ಹೇಳಿದಾಗ ಎದ್ದಯ ಓಡಿದೆವು. ಗೇಟ್ ಬಳಿ ನೂಕು ನುಗ್ಗಾಲಾಗಿ ನಾವು ಬಿದ್ದೇವು. ಕೆಸರಲ್ಲಿ ಕಾಲು ಹೂತು ಹೋಗುತ್ತಿತ್ತು, ಶೂ ಕಳಚಿ ಹೋಗಿತ್ತು. ಆದರೂ ಓಡಿದ್ವಿ. 20 ನಿಮಿಷ ಬುಲೆಟ್ ಸದ್ದು ಕೇಳಿಸಿತ್ತು. ಹಿಂತಿರುಗಿ ಬಂದಾಗ ಸ್ವಲ್ಪ ದೂರಕ್ಕೆ ಕುದುರೆ ಸವಾರಿ ಮಾಡಿಕೊಂಡು ಬಂದೆವು. ಉಳಿದವರು ಒಂದು ಕಡೆ ಹೋದರೆ, ನಮ್ಮನ್ನು ಇನ್ನೊಂದೆಡೆ ಕರೆದುಕೊಂಡು ಹೋದರು. ಕೆಳಗೆ ಬಂದಮೇಲೂ ಮೂರು ಜನ ಗನ್ ಹಿಡಿದುಕೊಂಡು ಸಿವಿಲ್ ಡ್ರೆಸ್‌ನಲ್ಲಿ ಇದ್ದದ್ದನ್ನು ನೋಡಿ ಭಯವಾಗಿತ್ತು.
ಮೇಲಿಂದ ಬದುಕಿ ಬಂದೆವು. ಇಲ್ಲಿ ಸಾಯೋದಿದ್ದರೆ ಹೇಗೋ ಸಾಯೋದೆ ಅಂತಾ ಧೈರ್ಯ ಮಾಡಿ ಹೋದೆವು. ಪುಣ್ಯಕ್ಕೆ ಅವರು ಪೊಲೀಸ್ ಆಗಿದ್ದರು. ಆಗ ಸ್ವಲ್ಪ ಸಮಾಧಾನವಾಯ್ತು. ಆದರೂ ಸುತ್ತ ಕಾಡಿನ ಮಧ್ಯೆ ಯಾರು ಶೂಟ್ ಮಾಡುತ್ತಾರೆ ಅಂತಾ ಭಯವಿತ್ತು. ಸೇನೆಯವರನ್ನು ಕಂಡಾಗ ಸಮಾಧಾನವಾಗಿತ್ತು. ಹೇಗೋ ಶ್ರೀನಗರಕ್ಕೆ ಬಂದರೂ ಘಟನೆಯ ಭಯ ಮಾತ್ರ ಹೋಗಿರಲಿಲ್ಲ ಎಂದು ಭಯಾನಕ ಅನುಭವವನ್ನು ಪ್ರದೀಪ್ ಕುಟುಂಬ ತೆರೆದಿಟ್ಟಿದ್ದಾರೆ.