ಮಲ್ಪೆ: ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆ ಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿರುವ ಮಲ್ಪೆ ಕಡಲ ತೀರದಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಡೆ ಬೇಲಿ ನಿರ್ಮಿಸಲಾಗಿದೆ. ಈ ಮೂಲಕ ಮುಂದಿನ ಮೂರು ತಿಂಗಳು ಪ್ರವಾಸಿಗರು ನೀರಿಗೆ ಇಳಿದು ಮೋಜು, ಮಸ್ತಿ ಮಾಡದಂತೆ ಕ್ರಮ ವಹಿಸಲಾಗಿದೆ.
ಪ್ರಸ್ತುತ ಮಲ್ಪೆ ಕಡಲತೀರದಲ್ಲಿ ಅಲೆಗಳ ಅಬ್ಬರ ಬಿರುಸುಗೊಂಡಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಠಿ ಯಿಂದ ಸಮುದ್ರದ ನೀರಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ. ಆ ಕಾರಣದಿಂದ ಪ್ರವಾಸಿಗರು ನೀರಿಗೆ ಇಳಿಯುವುದಕ್ಕೆ ಕಡಿವಾಣ ಹಾಕಲು ಬೀಚ್‌ನ ಸುಮಾರು 1 ಕಿ.ಮೀ. ಉದ್ದ ತಡೆಬೇಲಿ ನಿರ್ಮಿಸಲಾಗಿದೆ
ಸಮುದ್ರತೀರದಿಂದ ಸುಮಾರು 20 ಅಡಿಗಳಷ್ಟು ದೂರ, ಒಂದು ಕಿ.ಮೀ. ಬೀಚ್‌ನ ಉದ್ದಕ್ಕೂ 10 ಅಡಿ ಎತ್ತರದಲ್ಲಿ ಫಿಶ್‌ನೆಟ್ ಬಳಸಿ ತಡೆಬೇಲಿಯನ್ನು ಹಾಕಲಾಗಿದೆ. ತಡೆಬೇಲಿಯ ಉದ್ದಕ್ಕೂ ಕಂಬಗಳಲ್ಲಿ ಎಚ್ಚರಿಕೆ ಸೂಚಕವಾಗಿ ಕೆಂಪು ಧ್ವಜವನ್ನು ಎಲ್ಲರಿಗೆ ಗೋಚರಿಸುವಂತೆ ಅಳವಡಿಸಲಾಗಿದೆ. ನೀರಿಗಿಳಿಯದಂತೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಎಚ್ಚರಿಕೆ ಫಲಕವನ್ನು ಹಾಕಲಾಗಿದೆ.ಸಮುದ್ರದ ಪರಿಸ್ಥಿತಿ ನೋಡಿಕೊಂಡು ಸೆಪ್ಟಂಬರ್ ಆರಂಭದಲ್ಲಿ ತಡೆಬೇಲಿಯನ್ನು ತೆರವುಗೊಳಿಸುವುದಾಗಿ ಪ್ರವಾಸೋದ್ಯಮ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಮಲ್ಪೆ ಬೀಚ್‌ನಲ್ಲಿ ಒಟ್ಟು 5 ಮಂದಿ ಜೀವರಕ್ಷಕರು, ಇಬ್ಬರು ಪ್ರವಾಸಿ ಮಿತ್ರರು, ಮೂರು ಮಂದಿ ಕರಾವಳಿ ಪೊಲೀಸ್ ಸೆಕ್ಯೂರಿಟಿಗಳಿದ್ದಾರೆ. ಅಲ್ಲದೆ ಮಳೆಗಾಲದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚುವರಿ ರಕ್ಷಣಾ ಸಿಬಂದಿಗಳನ್ನು ಇಲ್ಲಿ ನೇಮಿಸಲಾಗಿದೆ. ರಕ್ಷಣಾ ಪರಿಕರಗಳನ್ನು ಹೆಚ್ಚಿಸಲಾಗಿದೆ.