ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿ-ಪೋಷಕರ ಸಮಾವೇಶ “ವಿವೇಕ ಸಂಕಲ್ಪ-2026” ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ. ವಹಿಸಿದರು. ಪೋಷಕರನ್ನುದ್ದೇಶಿಸಿ ಮಾತನಾಡಿದ ಅವರು, 65 ವರ್ಷಗಳ ಇತಿಹಾಸವಿರುವ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸ್ಥಾಪನೆಯ ಉದ್ದೇಶ ಭಾರತೀಯ ಸಂಸ್ಕೃತಿ , ಹಿಂದೂ ಜೀವನ ಮೌಲ್ಯಗಳನ್ನು ನಿರ್ಮಾಣ ಮಾಡುವುದಾಗಿದೆ. ನಮ್ಮೆಲ್ಲರಿಗೂ ಒಂದು ಸಾಮಾಜಿಕ ಜವಾಬ್ದಾರಿ ಇದೆ.

ಈ ದೇಶ ವಿಕಸಿತ ಭಾರತ ಆಗಬೇಕಾದರೆ, ಇಂದಿನ ಯುವಜನಾಂಗ ಶಕ್ತಿ ತುಂಬಬೇಕಾಗಿದೆ. ನಮ್ಮ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜವಾಬ್ದಾರಿಯುತ, ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಬೇಕು. ಸಮಾಜದಲ್ಲಿ ಎಲ್ಲವನ್ನು ಪಡೆದು ಮರಳಿ ಸಮಾಜಕ್ಕೆ ಋಣಸಂದಾಯ ಮಾಡುವ ಕರ್ತವ್ಯವನ್ನು ವಿದ್ಯಾರ್ಥಿಗಳು ಪಾಲಿಸಬೇಕಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಇಲ್ಲಿನ ಖ್ಯಾತ ಮನೋವೈದ್ಯ ಹಾಗೂ ಲೇಖಕರಾದ ಡಾ.ವಿರೂಪಾಕ್ಷ ದೇವರಮನೆ ಮಾತನಾಡುತ್ತಾ, ಮಕ್ಕಳಿಗೆ ತಂದೆ ತಾಯಿಯರೇ ಬಹು ದೊಡ್ಡ ಮಾದರಿ. ಇಂತಹ ಮಾದರಿ ಕುಟುಂಬವು ಮಕ್ಕಳಲ್ಲಿ ಶಿಸ್ತಿನ ಜೀವನ ಶೈಲಿಯನ್ನು ರೂಪಿಸಿ ಅವರನ್ನು ಉನ್ನತ ಮಟ್ಟಕ್ಕೆ ಏರಲು ಸಹಾಯ ಮಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕೆಟ್ಟ ಚಟಗಳಿಗೆ ಬಲಿ ಆಗದಂತಹ ವಾತಾವರಣ ನಿರ್ಮಾಣ ಮಾಡುವ ಬಹುದೊಡ್ಡ ಜವಾಬ್ದಾರಿ ಪೋಷಕರ ಮುಂದಿದೆ. ಅವರ ಪ್ರೀತಿ, ಕಾಳಜಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳಿದರು.
ಬಳಿಕ ಕಾಲೇಜಿನಲ್ಲಿ ಲಭ್ಯವಿರುವ ಸಿ.ಎ ಪ್ರವೇಶ ಪರೀಕ್ಷೆಗಳ ತರಬೇತಿ, ಷೇರು ಮಾರುಕಟ್ಟೆ ಹಾಗೂ ಟ್ಯಾಲಿ ಸರ್ಟಿಫಿಕೇಟ್ ಕೋರ್ಸ್ಗಳ ಕುರಿತಾದ ಮಾಹಿತಿ ಹಾಗೂ ವಿದ್ಯಾರ್ಥಿಗಳ ಅಂಕಗಳನ್ನು ದಾಖಲಿಸುವ ಚಿಠಿಠಿ ಕುರಿತ ಮಾಹಿತಿಗಳನ್ನು ಉಪನ್ಯಾಸಕರಾದ ದೇವಿಪ್ರಸಾದ್ ಹಾಗೂ ಶ್ಯಾಮ್ ಪ್ರಸಾದ್ ನೀಡಿದರು. ವಸತಿನಿಲಯದ ಮುಖ್ಯ ನಿಲಯಪಾಲಕರಾದ ಚೇತನ್ ವಸತಿನಿಲಯದ ನಿಯಮಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ದಿ. ಉರಿಮಜಲು ರಾಮ ಭಟ್ ಜನ್ಮಾಚರಣೆಯ ಪ್ರಯುಕ್ತ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಭಾರತೀಯ ಸೇನೆಗೆ ಆಯ್ಕೆಯಾದ ಕಾಲೇಜಿನ ಹಿರಿಯ ವಿದ್ಯಾರ್ಥಿ ತಿಲಕ್ ಎಚ್.ವಿ. ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಆಡಳಿತಮಂಡಳಿಯ ಕೋಶಾಧಿಕಾರಿ ಸಚಿನ್ ಶೆಣೈ, ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು. ಸರಸ್ವತೀ ವಂದನೆಯೊAದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಪ್ರಾಂಶುಪಾಲರಾದ ದೇವಿಚರಣ್ ರೈ. ಎಮ್. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಉಪನ್ಯಾಸಕಿಯರಾದ ಯಶಮಂತಿ ಡಿ. ವಂದಿಸಿ, ಉಷಾ ಎ. ಎಮ್. ನಿರೂಪಿಸಿದರು.

