ಕಾರ್ಕಳದಲ್ಲಿ ‘ದ್ರೌಪದಿ ಪ್ರತಾಪ’ ಯಕ್ಷಗಾನ ಪ್ರದರ್ಶನ‌

0
8

ಕಾರ್ಕಳ : ರಾಜಾಪುರ ಸಾರಸ್ವತ ಸೊಸೈಟಿ (ರಿ), ಕಾರ್ಕಳ ಇದರ ಮಹಾಸಭೆಯ ಪ್ರಯುಕ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಕ್ಷ್ಮಿ ಮಹಿಳಾ ಮಂಡಳಿ, ಲಕ್ಷ್ಮೀಪುರ, ಕಾರ್ಕಳ ಇವರ ವತಿಯಿಂದ ‘ದ್ರೌಪದಿ ಪ್ರತಾಪ’ ಎಂಬ ಯಕ್ಷಗಾನ ಪ್ರಸಂಗವನ್ನು ಸೆಪ್ಟೆಂಬರ್ 6ರಂದು ಜೋಡುರಸ್ತೆಯ ಸಹಕಾರ ಸಿಂಧೂರ ಸಭಾಭವನದಲ್ಲಿ ಪ್ರದರ್ಶಿಸಲಾಯಿತು.

ಅಪರಾಹ್ನ 2 ಗಂಟೆಗೆ ಆರಂಭಗೊಂಡ ಯಕ್ಷಗಾನ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯಿತು. ಪೌರಾಣಿಕ ಕಥಾನಕವನ್ನು ಯಕ್ಷಗಾನದ ಸಾಂಪ್ರದಾಯಿಕ ಶೈಲಿಯಲ್ಲಿ ಮನೋಜ್ಞವಾಗಿ ಪ್ರಸ್ತುತಪಡಿಸಿದ ಕಲಾವಿದರು ತಮ್ಮ ಅಭಿನಯ, ನೃತ್ಯ ಹಾಗೂ ಸಂಭಾಷಣೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಯಕ್ಷಗಾನಕ್ಕೆ ಭಾಗವತರಾಗಿ ನೀಲಾವರ ಕೇಶವ ಆಚಾರ್ಯ, ಚೆಂಡೆಯಲ್ಲಿ ಭಾಸ್ಕರ ಆಚಾರ್ಯ ಹಾಗೂ ಮದ್ದಳೆಯಲ್ಲಿ ಗೋಪಾಲಕೃಷ್ಣ ಆಚಾರ್ಯ ಸಹಕರಿಸಿದರು.

ಮುಮ್ಮೇಳದಲ್ಲಿ ಉಷಾ ನಾಯಕ್ (ದ್ರೌಪದಿ), ಶೋಭಾ ಪ್ರಭು (ಭೀಮ), ಶ್ರೀನಿಧಿ (ಅರ್ಜುನ), ಪ್ರಿಯಾಂಕ (ಸುಭದ್ರೆ), ಹರ್ಷ ಕೃಷ್ಣ, ಸುಲೋಚನಾ ನಾಯಕ್ (ಬಲರಾಮ), ಸ್ವಾತಿ (ಈಶ್ವರ), ಲತಾ ಪಾಟ್ಕರ್ (ಪಾರ್ವತಿ) ಹಾಗೂ ಕುಮಾರಿ ಸಿಂಧು (ಬಾಲ ಗೋಪಾಲರು) ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ಪ್ರಸಂಗಕ್ಕೆ ಜೀವ ತುಂಬಿದರು.

ಮಹಿಳಾ ಕಲಾವಿದರ ತಂಡದಿಂದ ಮೂಡಿಬಂದ ಯಕ್ಷಗಾನ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿತು. ಪೌರಾಣಿಕ ಪ್ರಸಂಗದ ಮೂಲಕ ಯಕ್ಷಗಾನ ಕಲೆಯ ಶ್ರೀಮಂತಿಕೆ ಹಾಗೂ ಮಹಿಳಾ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಲಾಯಿತು.