ಬದಿಯಡ್ಕ: ‘ಶಿಕ್ಷಣವು ವಿದ್ಯಾರ್ಥಿಗೆ ಹೇರಿಕೆಯಾಗಬಾರದು. ವಿದ್ಯಾರ್ಥಿಯು ತನ್ನ ಆಸಕ್ತ ವಿಚಾರದಲ್ಲಿ ಶಿಕ್ಷಣ ನಡೆಸಬೇಕು. ಸ್ವ ಉದ್ಯೋಗಕ್ಕೆ ಅವಕಾಶ ನೀಡುವ ಅನೇಕ ತರಬೇತಿಗಳು ಇವೆ. ಶಿಕ್ಷಣ ಕ್ಷೇತ್ರದಲ್ಲಿ ಗಡಿನಾಡ ಕನ್ನಡಿಗರಿಗೆ ವಿಶೇಷ ಸೌಲಭ್ಯಗಳೂ ಇವೆ’ ಎಂದು ಕಾಸರಗೋಡಿನ ನ್ಯಾಯವಾದಿ ಕೆ ಸತ್ಯನಾರಾಯಣ ತಂತ್ರಿ ಹೇಳಿದರು. ಅವರು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಶೈಕ್ಷಣಿಕ ಮಾರ್ಗದರ್ಶನ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ‘ ಪ್ರಸ್ತುತ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ ಸಿ ನಂತರ ಪದವಿಪೂರ್ವ ಶಿಕ್ಷಣವು ಬೇಸಿಕ್ ಕೋರ್ಸ್ ಆಗಿದೆ. ವೊಕೇಶನಲ್ (ವೃತ್ತಿಪರ) ಕೋರ್ಸ್, ಮೆಡಿಕಲ್ ಲ್ಯಾಬರೇಟರಿ ಟೆಕ್ನಿಶಿಯನ್ ಕೋರ್ಸ್, ತಾಂತ್ರಿಕ ವಿಜ್ಞಾನ ಸಹಿತ ಅನೇಕ ಕೋರ್ಸುಗಳೂ ಇವೆ. ಈ ಬಗ್ಗೆ ಪರಿಶೀಲಿಸಿ, ಸಮಾಲೋಚಿಸಿ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಬೇಕು’ ಎಂದು ಅವರು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಡಾ. ಬೇ. ಸೀ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ, ‘ವಿದ್ಯಾರ್ಥಿಯ ಶೈಕ್ಷಣಿಕ ಆಯ್ಕೆಯಲ್ಲಿ ಅಪೇಕ್ಷೆ ಹಾಗೂ ಸಾಧನೆ ಪ್ರಮುಖ. ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಅವರ ಜೀವನಾನುಭವವೂ ಬೇಕು. ಅಪರಿಮಿತ ಬೇಡಿಕೆ, ವ್ಯವಸ್ಥೆಯಲ್ಲಿ ಶೈಕ್ಷಣಿಕ ಮಾಹಿತಿಗಳ ಸಂವಹನ ಮುಖ್ಯ’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಪರಿಷತ್ತಿನ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪಿಟಿಎ ಅಧ್ಯಕ್ಷ ಎ. ಅನಂತಕೃಷ್ಣ ಚಡಗ, ಶಾಲೆಯ ಗುರುಗಳಾದ ಸರೋಜಾ ಟೀಚರ್, ಗಣೇಶ ಮಾಸ್ಟರ್ ಮೊದಲಾದವರು ಇದ್ದರು. ಸಾಹಿತಿ ಶಾರದಾ ಎಸ್ ಭಟ್ ಕಾಡಮನೆ ಪ್ರಾರ್ಥನೆ ಹಾಡಿದರು. ಕಾಸರಗೋಡಿನ ಕನ್ನಡ ಭವನ ಪ್ರಕಾಶನದ ಸಂಧ್ಯಾರಾಣಿ ಟೀಚರ್ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು ವಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಅನೇಕ ಮಂದಿ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.